ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಹಿನ್ನೆಲೆ ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರವಾಗಿ ನಾನು ತುಂಬಾ ಮಾತನಾಡಬಲ್ಲೆ. ನನಗೆ ಎಲ್ಲಾ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ಕಾರ್ಯದರ್ಶಿ ನಾರಾಯಣರಾವ್ ಅವರು ಇಂದು ಜನತಾ ದಳ ಕಚೇರಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು, ಪರಿಷತ್ ಸದಸ್ಯ ಶರವಣ, ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಧ್ವಜಾರೋಹಣ ನೆರವೇರಿದ ಬಳಿಕ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿ ನಾಡಿನ ಜನತೆಗೆ 73ನೇ ವರ್ಷದ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಬಳಿಕ ಫೋನ್ ಕದ್ದಾಲಿಕೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರ ನಾನು ತುಂಬಾ ಮಾತನಾಡಬಲ್ಲೆ. ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನಾಗಿದೆ ಎನ್ನುವ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಯಾವ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಆಗಿದೆ ಅನ್ನೋ ವಿಚಾರವೂ ಗೊತ್ತಿದೆ. ಕೇಂದ್ರದಲ್ಲಿ ಏನು ನಡೀತಿದೆ? ಯಾರ ಕಾಲದಲ್ಲಿ ಏನು ಆಗಿದೆ ಎಂಬುದು ಗೊತ್ತಿದೆ. ಈ ಬಗ್ಗೆ ಚರ್ಚೆ ಬೇಕಿಲ್ಲ. ಆದರೆ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ ಅನ್ನೋ ಬಿಜೆಪಿ ಆರೋಪಿಸಿದೆ. ಬಿಜೆಪಿ ಅವರಿಗೆ ಬೇರೆ ಕೆಲಸ ಇಲ್ಲ ಅಲ್ವಾ? ಅವರು ಏನೇನು ಮಾಡಿದ್ದಾರೆ ಗೊತ್ತಿದೆ. ಕದ್ದಾಲಿಕೆ ಯಾಕೆ? ಅವರು ನೇರವಾಗಿ ಹೊತ್ತುಕೊಂಡು ಹೋದ ಜನ ಎಂದು ಮಗನ ಮೇಲಿನ ಆರೋಪದಕ್ಕೆ ದೇವೇಗೌಡರು ಕೆಂಡಾಮಂಡಲರಾದರು.
ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಹಿದೆಂದೂ ಕಂಡು ಕೇಳದ ಪ್ರವಾಹ ದೇಶದಲ್ಲಿ ಬಂದಿದೆ. ರೈತರು, ಜನರು, ಸಾವನ್ನಪಿದ್ದಾರೆ. ಸರ್ಕಾರ ಕೂಡಾ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಈ ಸಮಯದಲ್ಲಿ ಕೆಲಸ ಮಾಡಬೇಕು. ಸರ್ಕಾರ ನೆರೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ನೆರೆ ಪರಿಹಾರಕ್ಕೆ ಅನುದಾನ ನೀಡದ ಪ್ರಧಾನಿ ಮೋದಿ ವಿರುದ್ಧ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಒಂದು ಮೀಟಿಂಗ್ ಮಾಡಿ ಹಣ ಕೊಡದೇ ಇರೋದು ದುರಂತ. ಅವರಿಗೆ ಏನ್ ಕಷ್ಟ ಇದೆಯೋ ಗೊತ್ತಿಲ್ಲ. ಇಲ್ಲಿಯವರೆಗೂ ಒಂದು ರೂಪಾಯಿ ರಾಜ್ಯಕ್ಕೆ ಬಂದಿಲ್ಲ ಎಂದು ಟಾಂಗ್ ಕೊಟ್ಟರು.
ನೀರು ಕಡಿಮೆ ಆದ ಮೇಲೆ ನಾನು ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರ ವರದಿ ಕೊಡುತ್ತೆ. ಕೇಂದ್ರ ತಂಡ ಕೂಡಾ ಬಂದು ಹೋಗುತ್ತೆ. ಆಗಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳದೆ ಹೋದರೆ ನಾನೇ ಪ್ರಧಾನಿಯನ್ನು ಭೇಟಿಯಾಗುತ್ತೇನೆ. ಅಗತ್ಯ ಬಿದ್ದರೆ ಪ್ರಧಾನಿ ಮೋದಿ ಅವರಿಗೆ ಇನ್ನೊಂದು ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ವಿಚಾರದ ಬಗ್ಗೆ ಮಾತನಾಡಿ, 370ನೇ ವಿಧಿ ತೆಗೆದಿರುವುದರಿಂದ ಸ್ವಲ್ಪ ಬಿಕ್ಕಟ್ಟು ಉಂಟಾಗಿದೆ. ಕೇಂದ್ರ ಸರ್ಕಾರ ಕಾಶ್ಮೀರ ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ಬಿಕ್ಕಟ್ಟು ಮುಂದುವರೆಯುತ್ತದೆ. ಕಾಶ್ಮೀರದಲ್ಲಿ ಹೆಚ್ಚು ಸೈನ್ಯ ಇಟ್ಟು ನಿರ್ಬಂಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಬಂಧನದಲ್ಲಿ ಇರೋರನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಸಹಬಾಳ್ವೆಯಿಂದ ಬಾಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು. ಹಿಂದೂ-ಮುಸ್ಲಿಂ ಎನ್ನುವ ಒಡಕು ಮೂಡದಂತೆ ಕ್ರಮವಹಿಸಬೇಕು. ಸುಮಧುರ ಭಾವನೆ ಮೂಡುವ ವಾತಾವರಣ ಕೇಂದ್ರ ಸರ್ಕಾರ ಸೃಷ್ಟಿ ಮಾಡಬೇಕು. ಇಂತಹ ಬಿಕ್ಕಟ್ಟನ್ನ ಹೆಚ್ಚು ದಿನ ಕೇಂದ್ರ ಸರ್ಕಾರ ಮುಂದುವರಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ದೇವೇಗೌಡರು ಮನವಿ ಮಾಡಿಕೊಂಡರು.
ದೇಶದಲ್ಲಿ ಹಲವು ಸಮಸ್ಯೆಗಳು ಇದೆ. 3 ತಿಂಗಳಲ್ಲಿ 5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಬೇಸಾಯದ ಬಗ್ಗೆ ಸರಿಯಾದ ಕ್ರಮ ಆಗಿಲ್ಲ. ಕೇಂದ್ರ ಸರ್ಕಾರ ಹೇಳೊದೊಂದು ಮಾಡುವುದು ಮತ್ತೊಂದು ಆಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಇದನ್ನ ಕೇಂದ್ರ ಸರಿಪಡಿಸಬೇಕು. ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಅನೇಕ ಸಮಸ್ಯೆ ಇದೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಧ್ವಜಾರೋಹಣದ ಬಳಿಕ ಜೆಡಿಎಸ್ ಮುಖಂಡ ನಾರಾಯಣರಾವ್ ಮಾತನಾಡಿ, ಈಗಾಗಲೇ ದೇಶದಲ್ಲಿ ಒಮ್ಮೆ ತುರ್ತು ಪರಿಸ್ಥಿತಿ ನೋಡಿದ್ದೇವೆ. ಮತ್ತೊಮ್ಮೆ ಅಂತಹ ಸ್ಥಿತಿ ಬರುವ ಸನ್ನಿವೇಶ ಕಾಣುತ್ತಿದೆ. ಹಾಗೆ ಆಗದಂತೆ ತಡೆಯಬೇಕಿದೆ. ಅದಕ್ಕೆ ದೇವೇಗೌಡರೇ ನೇತೃತ್ವ ವಹಿಸಿಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿ ಹೋರಾಡಬೇಕು. ಈ ಕಾರ್ಯ ದೇವೇಗೌಡರಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ನೆರೆ ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂಧಿಸಿಲ್ಲ. ರಾಜ್ಯ ಸರ್ಕಾರವೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು. ಬಳಿಕ ಜೆಡಿಎಸ್ ಪಕ್ಷ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದೆ. ಈ ಮಾತನ್ನ ಸ್ವತಃ ದೇವೇಗೌಡರೂ ಒಪ್ಪಿಕೊಂಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕಿದೆ. ದೇವೇಗೌಡರ ಕೈ ಬಲಪಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.