ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆಯ (Loksabha Elections 2024) ಕಾವು ರಂಗೇರಿದೆ. ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದ್ದು, 14 ಕ್ಷೇತ್ರದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಈ ನಡುವೆ ಕಾಂಗ್ರೆಸ್ ದೇಶದ ಜನರ ಸಮಸ್ಯೆಗಳನ್ನು ಆಲಿಸಲೆಂದು ವಿಭಿನ್ನವಾಗಿ ಯಾತ್ರೆಗಳನ್ನು ಕೈಗೊಂಡಿತ್ತು. ಈ ಯಾತ್ರೆಯಿಂದ ಕರ್ನಾಟಕದಲ್ಲಿ ಯಶಸ್ಸು ಸಿಕ್ಕಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಯಾತ್ರೆಗಳು ಕೈ ಹಿಡಿಯುತ್ತಾ ಎಂಬುದರ ಬಗ್ಗೆ ನೋಡೋಣ..
ಹೌದು. ಕಳೆದ 10 ವರ್ಷಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹವಾ ಇದೆ. ಹೀಗಾಗಿ ಹೇಗಾದರೂ ಮಾಡಿ ಮೋದಿಯನ್ನು ಹವಾವನ್ನು ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಪಣತೊಟ್ಟಿದೆ. ಅದಕ್ಕಾಗಿ ಸಾಕಷ್ಟು ಬಾರಿ ಮೋದಿ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಿದೆ. ಆದರೆ ಕಾಂಗ್ರೆಸ್‍ನ ಪ್ರಯತ್ನಗಳು ಕೈಗೂಡಲಿಲ್ಲ. ಬಿಜೆಪಿ ವೈಫಲ್ಯಗಳ ಬಗ್ಗೆ ಹೇಳಿಕೊಂಡರೂ ಯಾವುದೇ ಫಲಪ್ರದವಾಗಲಿಲ್ಲ. ದೇಶದಲ್ಲಿ ಮೋದಿ ಅಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಮೊರೆ ಹೋಯಿತು.
Advertisement
Advertisement
ಅಂತೆಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಮಾಡಿತ್ತು. ಇದು ಕಾಂಗ್ರೆಸ್ ಪಕ್ಷದ ಇಮೇಜ್ ವೃದ್ಧಿಗೆ ಸಹಕಾರಿಯಾಗಿದೆ. ಆದರೆ ಇದು ಮತಗಳಾಗಿ ಪರಿವರ್ತನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
Advertisement
ಪಾದಯಾತ್ರೆಯಿಂದಾಗಿ ಎಲ್ಲೋ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ಕಾರ್ಯಕರ್ತರು ಮೈಕೊಡವಿ ನಿಂತಿದ್ದು ಸಹಜ. ಯಾಕೆಂದರೆ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) ಜೊತೆ ಪಕ್ಷದ ಇತರ ನಾಯಕರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೊತೆಗೆ ಯಾತ್ರೆಯ ವೇಳೆ ಅಲ್ಲಲ್ಲಿ ಸಂವಾದ, ಚರ್ಚೆಗಳ ಮೂಲಕ ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಕಾಂಗ್ರೆಸ್‍ನಿಂದ ಇದೊಂದು ಹೊಸ ಪ್ರಯತ್ನವೇ ಸರಿ. ಇದನ್ನೂ ಓದಿ: ಲೋಸಮರದ ಹೊತ್ತಲ್ಲೇ ‘ಕೈ’ಗೆ ಶಾಕ್- ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ
Advertisement
ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatre) ಕರ್ನಾಟಕ್ಕೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ ಎಂದು ತಪ್ಪಾಗಲಾರದು. ಕೇರಳದಿಂದ ಚಾಮರಾಜನಗರ, ಮೈಸೂರು ಮಂಡ್ಯ, ತುಮಕೂರು ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲಕ ಈ ಪಾದಯಾತ್ರೆ ಹಾದುಹೋಗಿದೆ. ಈ ಯಾತ್ರೆ ಎಲ್ಲಾ ಜಿಲ್ಲೆಗಳಿಗೆ ಹೋಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸುವ ಮೂಲಕ ಹುರಿದುಂಬಿಸುವ ಕೆಲಸ ಮಾಡಿತ್ತು. ಅಲ್ಲದೇ ಮಂಡ್ಯದ ಪಾಂಡವಪುರದಲ್ಲಿ ಸ್ವತಃ ಸೋನಿಯಾ ಗಾಂಧಿಯವರೇ ಬಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಜನರನ್ನು ಮತ್ತಷ್ಟು ಹುರಿದುಂಬಿಸಿದರು. ಒಟ್ಟಿನಲ್ಲಿ ಯಾತ್ರೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.
ದ್ವೇಷದ ಅಂಗಡಿಯಲ್ಲಿ ಪ್ರೀತಿ ಹಂಚುವ ವ್ಯಾಖ್ಯಾನ, ಇದು ಸರ್ವಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯ ವಿರುದ್ಧ ಭ್ರಷ್ಟಾಚಾರ, ಕೋಮುದ್ರೋಹಿ ವಿಚಾರಗಳನ್ನು ಬಳಸಿಕೊಂಡರು. ಒಟ್ಟಿನಲ್ಲಿ 2023ರಲ್ಲಿ ಪಕ್ಷದ ಸಂಘಟನೆಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದ್ದು ನಿಜ. ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಗೆ ಕೂಡ ಸ್ವಲ್ಪ ಮಟ್ಟಿಗೆ ಲಾಭವಾಯಿತು.
ಉತ್ತರ ಭಾರರತದಲ್ಲಿಯೂ ಕಾರ್ಯಕರ್ತರನ್ನು ಮರುಸಂಘಟಿಸಲು ಈ ಯಾತ್ರೆ ಸಹಕಾರಿಯಾಗಿದೆ ಅಂತಾನೇ ಹೇಳಬಹುದು. ಆದರೆ ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಕೈಹಿಡಿದಿಲ್ಲ. ಇಡೀ ದೇಶದ ಮತದಾರರ ಮೇಲೆ ಪರಿಣಾಮ ಬೀರಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವವಲ್ಲಿ ಭಾರತ್ ಜೋಡ್ ಯಾತ್ರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಮಲಗಿದ್ದ ಬಹುತೇಕ ಕಾರ್ಯಕರ್ತರು ಎದ್ದು ಬೀದಿಗೆ ಬರುವಂತೆ ಮಾಡಿದ್ದು ಮಾತ್ರ ಇತಿಹಾಸ. ಇದು ಕಾಂಗ್ರೆಸ್‍ನ ಹೊಸ ಮೈಲಿಗಲ್ಲು, ಈ ಮೂಲಕ ಪಕ್ಷ ಇತಿಹಾಸ ನಿರ್ಮಿಸಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ರಾಹುಲ್ ಗಾಂಧಿ ವರ್ಚಸ್ಸನ್ನು ಈ ಯಾತ್ರೆ ಹೆಚ್ಚಿಸಿದೆ ಎಂಬ ವಿಶ್ಲೇಷಣೆ ಬಂದಿದೆ.
ಎರಡೇ ಪಾದಯಾತ್ರೆ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ (Bharat Jodo Nyay Yatre) ಈಶಾನ್ಯ ರಾಜ್ಯಗಳಲ್ಲಿ ಪ್ರತಿರೋಧಗಳು ವ್ಯಕ್ತವಾಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಹಕಾರ ದೊರೆಯದೆ ಪಕ್ಷಕ್ಕೆ ಸ್ವಲ್ಪ ಇರಿಸುಮುರುಸಾಯಿತು. ಆದರೆ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ನಿರಿಕ್ಷಿತ ಬೆಂಬಲ ದೊರೆಯದಿದ್ದರೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬೆಂಬಲವಾಗಿ ನಿಂತಿದ್ದು, ಸ್ವಲ್ಪ ನಿರಾಳವಾಗುವಂತೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಸಿಕ್ಕಿದಂತಾಗಿದೆ.
ಬಿಹಾರದಲ್ಲಿ ಆರ್ ಜೆಡಿ, ಯುಪಿಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (Akhilesh Yadav) ಬೆಂಬಲ ಸ್ವಲ್ಪ ಮಟ್ಟಿಗೆ ಸಹಕಾರಿಯಾಯಿತು. ಆದರೆ ಗುಜರಾತ್ ಸೇರಿದಂತೆ ಹಲವೆಡೆ ನಿರೀಕ್ಷಿತ ಬೆಂಬಲ ಪಡೆಯುವಲ್ಲಿ ವಿಫಲವಾಯಿತು. ಹಲವಾರು ವಿಚಾರಗಳು ನ್ಯಾಯಯಾತ್ರೆಯ ಮೂಲಕ ಬಿಂಬಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಜನಬೆಂಬಲ ಪಡೆಯುವಲ್ಲಿ ಕಾಂಗ್ರೆಸ್‍ಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿಲ್ಲ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಪ್ರಣಾಳಿಕೆ ರಚಿಸಲು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಅನುಭವಗಳು ನೆರವಾಗಿವೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪಾದಯಾತ್ರೆಯ ವೇಳೆ ಜನರ ಕೊಟ್ಟ ಸಲಹೆಗಳನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕೈ ಹಿಡಿದಿರುವ ಕಾಂಗ್ರೆಸ್ ಯಾತ್ರೆ ಇಡೀ ದೇಶದಲ್ಲಿ ಕೈ ಹಿಡಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.