ರಾಯಚೂರು: ಉಪಚುನಾವಣೆಯ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಚುನಾವಣೆಯನ್ನ ಇನ್ನೂ ಎದುರಿಸದ ಎರಡು ಕ್ಷೇತ್ರಗಳ ಅನರ್ಹ ಶಾಸಕರ ಪರಸ್ಥಿತಿ ಈಗಲೂ ಅತಂತ್ರವಾಗಿದೆ. ಆ ಎರಡೂ ಕ್ಷೇತ್ರಗಳ ಉಪಚುನಾವಣೆಗೂ ಅಷ್ಟೇನೂ ಮಹತ್ವ ಇಲ್ಲದ ಕಾರಣ ಇಲ್ಲಿನ ಟಿಕೆಟ್ ಆಕಾಂಕ್ಷಿಗಳಲ್ಲೇ ಉತ್ಸಾಹ ಕುಂದಿದಂತಾಗಿದೆ. ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಂತೂ ಇಷ್ಟುದಿನ ಇದ್ದ ಕುತೂಹಲವೇ ಈಗ ಮಾಯವಾದಂತೆ ಕಾಣುತ್ತಿದೆ.
ಕಳೆದ ವಿಧಾನಸಭಾ ಚುನಾವಣಾ ವೇಳೆ ಅಕ್ರಮ ಮತದಾನ ನಡೆದಿದೆ ಅಂತ ಅಂದಿನ ಬಿಜೆಪಿ ಅಭ್ಯರ್ಥಿಗಳು ನ್ಯಾಯಾಲಯ ಮೆಟ್ಟಿಲು ಏರಿದ್ದಕ್ಕೆ ರಾಯಚೂರಿನ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಇನ್ನೂ ನಡೆದಿಲ್ಲ. ಈಗ ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಮೂಲಕ ಬಿಜೆಪಿ ಸಂಖ್ಯಾಬಲದಿಂದ ಭದ್ರವಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಚುನಾವಣೆಗೂ ಅಷ್ಟೊಂದು ಮಹತ್ವವಿಲ್ಲ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಆರ್ ಆರ್ ನಗರದ ಅನರ್ಹ ಶಾಸಕ ಮುನಿರತ್ನ ಚುನಾವಣೆ ಎದುರಿಸಲು ಇನ್ನಷ್ಟು ಸಮಯ ಕಾಯಬೇಕಿದೆ.
ಇಷ್ಟು ದಿನ ದೂರನ್ನ ವಾಪಸ್ ಪಡೆಯಲ್ಲ, ನಾನೂ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ ಈಗ ದೂರನ್ನ ವಾಪಸ್ ಪಡೆದು ಯಾರೇ ಅಭ್ಯರ್ಥಿಯಾದರೂ ಪಕ್ಷಕ್ಕೆ ಬೆಂಬಲಿಸುತ್ತೇನೆ ಅಂತಿದ್ದಾರೆ. ಟಿಕೆಟ್ ಬೇಡಿಕೆಯಿಂದಲೇ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸನಗೌಡ, ಈಗ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ, ಅಕ್ರಮ ಮತದಾನ ನಡೆದಿದೆ ಅಂತ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಎಂ ಯಡಿಯೂರಪ್ಪನವರ ಮಾತಿಗೆ ಒಪ್ಪಿ ದೂರು ಹಿಂಪಡೆಯಲು ಮುಂದಾಗಿದ್ದಾರಂತೆ. ಆದರೆ ಅವರಿಗೆ ಟಿಕೆಟ್ ಗ್ಯಾರೆಂಟಿಯಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಬಸನಗೌಡ ತುರ್ವಿಹಾಳ
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಹಾರಿದ ಮೇಲೆ ಕಾಂಗ್ರೆಸ್ಸಿಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಾಗಿ ಉಪಚುನಾವಣೆ ಈಗಲೇ ಎದುರಾದ್ರೂ ಚುನಾವಣೆ ಎದುರಿಸಲು ಕಾಂಗ್ರೆಸ್ ಸದೃಢವಾಗಿಲ್ಲ. ಬಿಜೆಪಿ ಟಿಕೆಟ್ ಕೈತಪ್ಪಿದರೆ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಕದ ತಟ್ಟಬಹುದು ಅನ್ನೋ ವಿಚಾರವೂ ಸದ್ಯಕ್ಕೆ ಮುಗಿದ ಅಧ್ಯಾಯದಂತೆ ಕಾಣುತ್ತಿದೆ. ಕಾಂಗ್ರೆಸ್ ಮಾತ್ರ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ನಾನಾ ಕಸರತ್ತು ನಡೆಸಿದೆ.
ಒಟ್ಟಿನಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಈ ಎರಡೂ ಕ್ಷೇತ್ರಗಳನ್ನ ಗೌಣವಾಗಿಸಿದೆ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಗಂತೂ ಚುನಾವಣೆ ಬೇಡವಾಗಿದ್ದು ಎಂ.ಎಲ್.ಸಿ ನಿರೀಕ್ಷೆಯಲ್ಲಿದ್ದಾರೆ ಅನ್ನೋದು ಅವರ ಆಪ್ತವಲಯದ ಮಾತು. ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುವ ಬಸನಗೌಡ ತುರ್ವಿಹಾಳ ಈ ಬಾರಿಯಾದ್ರೂ ದೂರು ವಾಪಸ್ ತೆಗೆದುಕೊಳ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಮಸ್ಕಿ, ಆರ್‌ಆರ್ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ