ಬೆಂಗಳೂರು: ಈ ಹಿಂದೆ ಜಲ್ಸಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಕಾಂತ ಕನ್ನಲಿ ನಿರ್ದೇಶನದ ಎರಡನೇ ಚಿತ್ರ ‘ಇರುವುದೆಲ್ಲವ ಬಿಟ್ಟು’. ತನ್ನ ಕಾವ್ಯಾತ್ಮಕ ಶೀರ್ಷಿಕೆಯಿಂದಲೇ ಸೂಕ್ಷ್ಮ ಕಥಾ ಹಂದರದ ಸೂಚನೆ ನೀಡುತ್ತಿರೋ ಈ ಚಿತ್ರ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿದೆ. ಇದೊಂದು ಸೂಕ್ಷ್ಮ ಸಂಬಂಧಗಳ ಹುಡುಕಾಟದ ಚಿತ್ರವಾ? ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವಂಥಾ ಅಡಿಬರಹಕ್ಕೆ ಸೂಟ್ ಆಗುವಂಥಾ ಕಥೆಯನ್ನು ಈ ಚಿತ್ರ ಹೊಂದಿದೆಯಾ… ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ.
ಪ್ರೇಕ್ಷಕರ ನಡುವೆ ಇಂಥಾ ಪ್ರಶ್ನೆಗಳನ್ನು ಹುಟ್ಟು ಹಾಕೋದೇ ಒಂದು ಚಿತ್ರದ ಗೆಲುವಿನ ಮುನ್ಸೂಚನೆ. ಆ ನಿಟ್ಟಿನಲ್ಲಿ ಚಿತ್ರತಂಡ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ಖುಷಿಗೊಂಡಿದೆ. ಈಗ ಪ್ರೇಕ್ಷಕರ ನಡುವೆ ಹುಟ್ಟಿಕೊಂಡಿರೋ ಇಂಥಾ ಪ್ರಶ್ನೆಗಳಿಗೆಲ್ಲ ಉತ್ತರದಂಥಾ ಕೆಲ ವಿಚಾರಗಳನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.
Advertisement
Advertisement
ಅಷ್ಟಕ್ಕೂ ಕಾಂತ ಕನ್ನಲಿ ತಾನು ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ತಿರುಗುತ್ತಿದ್ದ ಕಾಲದಲ್ಲಿಯೇ ರೆಡಿ ಮಾಡಿಟ್ಟುಕೊಂಡಿದ್ದ ಕಥೆ ಇದು. ನಿರ್ದೇಶಕನಾಗಬೇಕೆಂಬ ಕನಸು ಅವರದ್ದಾಗಿತ್ತು. ಆದರೆ ಇದೊಂದು ಸಂಕೀರ್ಣವಾದ ಕಥಾ ಹಂದರ ಹೊಂದಿದ್ದ ಚಿತ್ರವಾದ್ದರಿಂದ ಅದಕ್ಕಾಗಿ ಕಾಯೋದು ಅನಿವಾರ್ಯವಾಗಿತ್ತು.
Advertisement
ನಮ್ಮ ಬಳಿಯಿರುವ ಎಲ್ಲದರಾಚೆಗೆ ಮತ್ತೇನನ್ನೋ ಬಯಸೋದು ಎಲ್ಲರ ಮನಸ್ಥಿತಿ. ಅದರಂತೆಯೇ ಅನಾಥಾಶ್ರಮದಲ್ಲಿಯೇ ಕಣ್ಣು ಬಿಟ್ಟು ಯಾವ ಸಂಬಂಧಗಳ ಅರಿವೂ ಇಲ್ಲದ ಹುಡುಗನೊಬ್ಬ ಮತ್ತೇನನ್ನೋ ಹುಡುಕಿ ಹೊರಡುತ್ತಾನೆ. ಅನಾಥ ಪ್ರಜ್ಞೆಯ ನಡುವೆಯೂ ಬೇರೇನಕ್ಕೂ ಕೊರತೆ ಇಲ್ಲದಂತೆ ಬೆಳೆದು ನಿಂತ ಆತನದ್ದು ಸುಂದರ ಕುಟುಂಬವೊಂದನ್ನು ತನ್ನದಾಗಿಸಿಕೊಳ್ಳೋ ಕನಸು. ಹಾಗೆ ಹೊರಟವನಿಗೆ ತಾನು ಏನೋ ಇದೆ ಅಂದು ಕೊಂಡಲ್ಲಿ ಮತ್ತೇನೋ ಇರುವುದು ಅರಿವಾಗೋದರ ಸುತ್ತ ಕಥೆ ಬಿಚ್ಚಿಕೊಳ್ಳುತ್ತೆ.
Advertisement
ಇಡೀ ಕಥೆ ಗಂಭೀರ ಭಾವ ಹೊಂದಿರುವಂತೆ ಕಂಡರೂ ಮನೋರಂಜನೆಯೇ ಈ ಚಿತ್ರದ ಮೂಲ ಉದ್ದೇಶ. ಆದ್ದರಿಂದಲೇ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=GRMSXFPmuCQ