ಕಾರವಾರ: ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ತೆರಳಬೇಕಿದ್ದರೆ ಆಯಾ ರಾಜ್ಯದ ರಸ್ತೆ ತೆರಿಗೆಯನ್ನು ಗಡಿ ಭಾಗದಲ್ಲಿ ಕಡ್ಡಾಯವಾಗಿ ಕಟ್ಟಲೇಬೇಕು. ಆದರೆ ಕಾರವಾರ ಗಡಿಭಾಗದಲ್ಲಿ ಇದು ಫಾಲೋ ಆಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ಲಕ್ಷಗಟ್ಟಲೇ ರಸ್ತೆ ತೆರಿಗೆ ವಂಚನೆಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಕರ್ನಾಟಕ ಸರ್ಕಾರವು ತೆರಿಗೆ ವಸೂಲಿ, ಅನಧಿಕೃತ ಸಾಗಾಟಗಳ ತಡೆಗಾಗಿ ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಪೊಲೀಸ್ ಹೀಗೆ ಹಲವು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿದೆ. ಆದರೆ ರಸ್ತೆ ತೆರಿಗೆ ವಸೂಲಿಗಾಗಿ ಆರ್.ಟಿ.ಓ ಕಚೇರಿ ಮಾತ್ರ ಯಾವುದೇ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಗೋವಾ ರಾಜ್ಯದಿಂದ ಬರುವ ವಾಣಿಜ್ಯ ಪ್ರವಾಸಿ ವಾಹನಗಳು ಪರ್ಮಿಟ್ ತೆಗೆದುಕೊಳ್ಳದೇ ತೆರಿಗೆ ವಂಚಿಸಿ ಕರ್ನಾಟಕ್ಕೆ ಪ್ರವೇಶ ಪಡೆಯುತ್ತಿದೆ. ಇಲ್ಲಿನ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಕೈತಪ್ಪಿ ಹೋಗುತ್ತಿದೆ.
Advertisement
Advertisement
ಕರ್ನಾಟಕದಿಂದ ಗೋವಾ ಗಡಿಗೆ ಯಾವುದೇ ವಾಣಿಜ್ಯ ವಾಹನಗಳು ತೆರಳಿದರೆ ತಪ್ಪದೇ ಪರ್ಮಿಟ್ ತೆಗೆದುಕೊಂಡು ಹಣ ಕಟ್ಟಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ಐದರಿಂದ ನಲವತ್ತು ಸಾವಿರದವರೆಗೆ ದಂಡ ವಿಧಿಸುತ್ತದೆ. ಕರ್ನಾಟಕದಲ್ಲಿಯೂ ಇದೇ ನಿಯಮಗಳು ಜಾರಿಯಲ್ಲಿದೆ. ಹೊರ ರಾಜ್ಯದಿಂದ ಆಗಮಿಸುವ ಬಸ್‍ಗಳಿಗೆ ಸೀಟಿನ ಲೆಕ್ಕದಲ್ಲಿ ಪರ್ಮಿಟ್ ಪಡೆದು ಹಣ ಕಟ್ಟಬೇಕು, ಗೋವಾದ ಗಡಿಯಲ್ಲಿಯೇ ಆರ್.ಟಿ.ಓ ಕಚೇರಿ ಇದ್ದು, ದಿನದ 24 ಗಂಟೆ ತೆರೆದಿರುತ್ತದೆ. ಹೀಗಾಗಿ ಯಾರೂ ಕೂಡ ವಂಚಿಸಿ ಹೋಗಲು ಸಾಧ್ಯವಿಲ್ಲ. ಕರ್ನಾಟಕದ ಗಡಿಯಲ್ಲಿ ಆರ್.ಟಿ.ಓ ಕಚೇರಿಯಾಗಲಿ, ಸಿಬ್ಬಂದಿಯಾಗಲಿ ಇರದೇ ಇರುವುದರಿಂದ ತೆರಿಗೆ ಹಣ ವಂಚಿಸಿ ಹಲವರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ.
Advertisement
ಉತ್ತರ ಕನ್ನಡ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ದಿನ ಗೋವಾ, ಮಹಾರಾಷ್ಟ ಸೇರಿ ಹಲವು ರಾಜ್ಯಗಳಿಂದ ನೂರಾರು ಬಾಡಿಗೆ ವಾಹನಗಳು ಆಗಮಿಸುತ್ತವೆ. ಬಹುತೇಕ ವಾಹನಗಳು ಪರ್ಮಿಟ್ ಪಡೆಯದೇ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿವೆ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಎಚ್ಚೆತ್ತು ಹೊರರಾಜ್ಯದ ವಾಹನ ಸವಾರರಿಂದ ಆಗುತ್ತಿರುವ ತೆರಿಗೆ ವಂಚನೆಯನ್ನು ತಪ್ಪಿಸಿಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv