ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ (Israel-Hamas War) ಪ್ರಾರಂಭವಾಗಿ 10 ದಿನ ಕಳೆದಿದೆ. ಅಂದಿನಿಂದ ಅಲ್ಲಿನ ಸ್ಥಿತಿ ತೀವ್ರಗೊಳ್ಳುತ್ತಲೇ ಇದೆ. ಈ ನಡುವೆ ಇಸ್ರೇಲ್‌ನ ರಕ್ಷಣಾ ಪಡೆ ಯದ್ಧಕ್ಕಾಗಿ ಲೇಸರ್ ಶಸ್ತ್ರಾಸ್ತ್ರವನ್ನು ಬಳಕೆ ಮಾಡಲು ಯೋಜಿಸಿರುವುದಾಗಿ ವರದಿಯಾಗಿದೆ.
ಇಲ್ಲಿಯವರೆಗೆ ಇಸ್ರೇಲ್ ಐರನ್ ಡೋಮ್ (Iron Dome) ಅನ್ನು ಬಳಸುತ್ತಿತ್ತು. ಇದೀಗ ಇಸ್ರೇಲ್ ಐರನ್ ಬೀಮ್ (Iron Beam) ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ವೇಗವಾಗಿ ತನ್ನತ್ತ ಚಲಿಸುವ ಕ್ಷಿಪಣಿ ಅಥವಾ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ವ್ಯವಸ್ಥೆಯಾಗಿದೆ.
ಐರನ್ ಬೀಮ್ ಅನ್ನು 2025 ರಲ್ಲಿ ಇಸ್ರೇಲ್‌ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಹಮಾಸ್ ಉಗ್ರರೊಂದಿಗೆ ಭೀಕರ ಯುದ್ಧ ಪ್ರಾರಂಭವಾಗಿರುವುದರಿಂದ ಇಸ್ರೇಲಿ ರಕ್ಷಣಾ ಸಚಿವಾಲಯ ಅದನ್ನು ಶೀಘ್ರವಾಗಿ ನಿಯೋಜಿಸಲು ಯೋಜಿಸಿದೆ. ಇಸ್ರೇಲಿ ಪಡೆಗಳು ಈಗ ಐರನ್ ಬೀಮ್‌ನ ನಿಯೋಜನೆಯನ್ನು ವೇಗಗೊಳಿಸುತ್ತಿವೆ ಮತ್ತು ಪರೀಕ್ಷೆಗಳನ್ನು ಪ್ರಾರಂಭಿಸುತ್ತಿವೆ ಎಂದು ಇಸ್ರೇಲ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
ಏನಿದು ಐರನ್ ಬೀಮ್?
ಐರನ್ ಬೀಮ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಅನಾವರಣಗೊಳಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಇದನ್ನು ಇನ್ನೂ ಅಳವಡಿಸಲಾಗಿಲ್ಲ. ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಸಿಸ್ಟಮ್ ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು ಅದು ಶಕ್ತಿಯುತ ಬೆಳಕಿನ ಕಿರಣಗಳನ್ನು ಹಾಯಿಸುವ ಮೂಲಕ ಶತ್ರುಗಳ ಕ್ಷಿಪಣಿ ಅಥವಾ ಅಸ್ತ್ರಗಳನ್ನು ನಾಶಪಡಿಸುತ್ತದೆ. ಐರನ್ ಡೋಮ್ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಿರ್ಮಿಸಿದ ಇಸ್ರೇಲಿ ಮೊಬೈಲ್ ಆಲ್-ವೆದರ್ ಏರ್ ಡಿಫೆನ್ಸ್ ಸಿಸ್ಟಮ್ ಆಗಿದೆ. ಇದನ್ನೂ ಓದಿ: ಷರತ್ತು ಪಾಲಿಸಿದ್ರೆ ಒತ್ತೆಯಾಳುಗಳ ಬಿಡುಗಡೆ – ಇಸ್ರೇಲ್ ಜೊತೆ ಸಂಧಾನಕ್ಕೆ ಮುಂದಾದ ಇರಾನ್
ಐರನ್ ಡೋಮ್‌ಗಿಂತ ಬೀಮ್ ಹೇಗೆ ಭಿನ್ನ?
ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೊಂದಿಗೆ ಕೆಲಸ ಮಾಡಲು ಐರನ್ ಬೀಮ್ ಅನ್ನು ಅಗ್ಗದ ಮತ್ತು ಹೊಂದಿಕೊಳ್ಳುವ ಪರ್ಯಾಯವೆಂದು ಪರಿಗಣಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವಾಲಯದ ಕ್ಷಿಪಣಿ ರಕ್ಷಣಾ ತಜ್ಞರ ಪ್ರಕಾರ ಐರನ್ ಡೋಮ್‌ನಿಂದ ಹಾರಿಸಲಾಗುವ ಪ್ರತಿ ಪ್ರತಿಬಂಧಕಗಳ ಬೆಲೆ 60,000 ಡಾಲರ್ ವೆಚ್ಚವಾಗುತ್ತದೆ. ಆದರೆ ಐರನ್ ಬೀಮ್ ಅಗ್ಗದ ಬೆಲೆಯಲ್ಲಿ ಲೇಸರ್ ಕಿರಣವನ್ನು ಕಳುಹಿಸಿ, ದಾಳಿಯನ್ನು ತಡೆಯಬಹುದು. ಐರನ್ ಬೀಮ್ ಐರನ್ ಡೋಮ್‌ಗಿಂತ ಚಿಕ್ಕದು ಮತ್ತು ಹಗುರವೂ ಆಗಿದೆ. ಇದನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಹಾಗೂ ಮರೆಮಾಡಲು ಸುಲಭವಾಗುತ್ತದೆ.
ಇಸ್ರೇಲ್-ಹಮಾಸ್ ಯುದ್ಧ:
ಹಮಾಸ್ ಅಕ್ಟೋಬರ್ 7 ರಂದು ಶನಿವಾರ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿತು. ಸಾವಿರಾರು ಜನರನ್ನು ಕೊಂದಿದ್ದು ಮಾತ್ರವಲ್ಲದೇ ನೂರಾರು ಇಸ್ರೇಲ್ ನಾಗರಿಕರನ್ನು ಎಳೆದೊಯ್ದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು. ಅಂದಿನಿಂದ ದಾಳಿಗೆ ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲ್ ಗಾಜಾ ಮೇಲೆ ಪ್ರತಿ ದಾಳಿ ನಡೆಸಿ 2,750 ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಇಬ್ಬರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ
Web Stories