ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣವೇ ಕಾಶ್ಮೀರವನ್ನು ಬಿಟ್ಟು ತೆರಳುವಂತೆ ಟೀಂ ಇಂಡಿಯಾ ಕ್ರಿಕೆಟರ್ ಇರ್ಫಾನ್ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಿಗೆ ಭಾರತೀಯ ಸೇನೆಯು ಸೂಚನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಹಾಗೂ ಮೆಂಟರ್ ಆಗಿ ಇರ್ಫಾನ್ ಪಠಾಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಉಳಿದುಕೊಂಡಿರುವ ಅವರಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ (ಜೆಕೆಸಿಎ) ಕೋಚ್, ಸಹಾಯಕ ಸಿಬ್ಬಂದಿ, ಆಟಗಾರರಿಗೂ ಕಾಶ್ಮೀರ ತೊರೆದು ತಕ್ಷಣವೇ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೇನೆಯು ಸೂಚಿಸಿದೆ. ಇದನ್ನೂ ಓದಿ: ಶ್ವೇತ ಬಾವುಟ ತೋರಿಸಿ, ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗಿ-ಪಾಕಿಸ್ತಾನಕ್ಕೆ ಭಾರತದ ಸಂದೇಶ
Advertisement
Advertisement
ಜೆಕೆಸಿಎ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ, ಅಭ್ಯಾಸ ಕೈಗೊಳ್ಳದಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ ಕ್ರೀಡಾಂಗಣದಲ್ಲೂ ಯಾರೂ ಉಳಿದುಕೊಳ್ಳಬಾರದು ಎಂದು ಖಡಕ್ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇರ್ಫಾನ್ ಪಠಾಣ್ ಹಾಗೂ ಜೆಕೆಸಿಎಗೆ ಸೇನೆಯು ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ.
Advertisement
ಜಮ್ಮು ಮತ್ತು ಕಾಶ್ಮೀರ ಕಣಿವೆ ಭಾಗದಲ್ಲಿ ಉಗ್ರರು ತಮ್ಮ ಉಪಟಳ ಮುಂದುವರಿಸಿದ್ದು, ಅವರನ್ನು ಮಟ್ಟಹಾಕಲು ಭಾರತೀಯ ಸೇನೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಮರನಾಥ ಯಾತ್ರಿಗಳನ್ನು ಹಾಗೂ ಕಣಿವೆ ರಾಜ್ಯದ ಪ್ರವಾಸಿಗರನ್ನು ವಾಪಸ್ ತೆರಳುವಂತೆ ಶುಕ್ರವಾರವೇ ಸೂಚನೆ ನೀಡಲಾಗಿತ್ತು. ಹೀಗಾಗಿ ಈಗಾಗಲೇ 6,200 ಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರವನ್ನು ತೊರೆದು ತಮ್ಮ, ತಮ್ಮ ಮನೆಗಳಿಗೆ ತೆರಳಿದ್ದಾರೆ.