– ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟುಗಳು
ಕಾರವಾರ: ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ಹಾಗೂ ಹವಾಮಾನ ಬದಲಾವಣೆ ಮೀನುಗಾರರ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದ್ದು, ನಷ್ಟ ಹಿನ್ನೆಲೆಯಲ್ಲಿ ಕಾರವಾರದ (Karwar) ಬಂದರಿನಲ್ಲಿ ಮೀನುಗಾರಿಕೆ ಬಂದ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ ಬಂದರಿನಲ್ಲಿ (Baithkol Port) ಬೋಟ್‌ಗಳು ಲಂಗರು ಹಾಕಿವೆ. ಪರಿಣಾಮ ಮೀನುಗಾರಿಕಾ ವಾಹನಗಳು ಖಾಲಿ ನಿಂತಿವೆ. ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯುತ್ತಿಲ್ಲ. ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದಾಗಿ ಹೊರ ದೇಶಕ್ಕೆ ಮೀನುಗಳ ರಫ್ತು ವಹಿವಾಟಿನಲ್ಲಿ ಇಳಿಕೆ ಕಂಡು ದರ ಕುಸಿತವಾಗಿದೆ. ಮತ್ತೊಂದೆಡೆ ಹವಾಮಾನ ಬದಲಾವಣೆಯಿಂದ ಸಮುದ್ರ ಉಗ್ರವಾಗಿದ್ದು, ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಮರಳಿ ಬಂದರಿನಲ್ಲಿ ಲಂಗರು ಹಾಕಿವೆ. ಇದನ್ನೂ ಓದಿ: ಇರಾನ್-ಅಮೆರಿಕ ಕದನ ವಿರಾಮ; ಮಧ್ಯಸ್ಥಿಕೆ ವಹಿಸಿದ ಶೆಹಬಾಜ್‌ಗೆ ನೊಬೆಲ್ ಶಾಂತಿ ನೀಡುವಂತೆ ಪಾಕ್‌ನಲ್ಲಿ ಕೂಗು
ಕಳೆದ ವರ್ಷ ಹೋಲಿಸಿದರೆ ಈ ವರ್ಷ ಮೀನುಗಾರಿಕೆ ಉತ್ತಮ ಎನ್ನಲಾಗಿತ್ತು. 9 ತಿಂಗಳ ಮತ್ಸ್ಯ ಬೇಟೆಯಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಮೀನುಗಾರರು ಸಮುದ್ರಕ್ಕಿಳಿದಿದ್ದರು. ಇನ್ನೇನು ಉತ್ತಮ ಬೇಟೆ ಸಿಗುತ್ತಿವೆ ಎನ್ನುವಷ್ಟರಲ್ಲಿ ಹವಮಾನ ಬದಲಾವಣೆಯಿಂದ ತಿಂಗಳುಗಳ ಕಾಲ ಮೀನುಗಾರರು ಸಮುದ್ರಕ್ಕಿಳಿಯಲಿಲ್ಲ. ನಂತರ ಮತ್ತೆ ಬಲೆ ಹಿಡಿದು ಹೊರಟ ಮೀನುಗಾರರಿಗೆ ಮಧ್ಯಪಾಚ್ಯ ಯುದ್ಧ ಸಂಘರ್ಷ ಬೆಲೆ ಇಳಿಕೆಯ ಆಘಾತ ತಂದಿತು. ಇದರಿಂದ ಹೊರರಾಜ್ಯದ ಕಾರ್ಮಿಕರನ್ನು ತಂದು ಸಾಲ ಮಾಡಿ ಬೋಟ್ ನಡೆಸುತ್ತಿದ್ದ ಮೀನುಗಾರರಿಗೆ ಲಾಭ ಸಿಗದಂತಾಗಿದೆ.
ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗಿದ್ದು, ತಿಂಗಳುಗಟ್ಟಲೇ ಸಮುದ್ರ ಪ್ರಯಾಣಕ್ಕೂ ಕೊಕ್ಕೆ ಬಿದ್ದಿದೆ. ಇದಲ್ಲದೇ ಕಳೆದ ಒಂದು ವಾರದಿಂದ ಸಮುದ್ರ ಕ್ಷುದ್ರವಾಗಿದ್ದು, ಆಳ ಸಮುದ್ರದಲ್ಲಿ ಮತ್ಸ್ಯಬೇಟೆಗೆ ತೊಡಕಾಗಿದೆ. ದರ ಕಡಿಮೆಯಾದ್ದರಿಂದ ಸದ್ಯ ಮೀನುಗಾರರು ಬಂದರಿನಲ್ಲಿ ಬೋಟುಗಳನ್ನ ಲಂಗುರು ಹಾಕಿದ್ದರೆ, ಹೊರ ರಾಜ್ಯದಿಂದ ಬಂದ ಕಾರ್ಮಿಕರು ಅವಧಿ ಮುಂಚಿತವಾಗಿ ಊರು ಸೇರುತ್ತಿದ್ದಾರೆ. ಜೂನ್ 1 ರಿಂದ ಬಂದ್ ಮಾಡಬೇಕಿದ್ದ ಮೀನುಗಾರಿಕೆ ಅವಧಿ ಮುಂಚಿತವಾಗಿ ಬಂದ್ ಆಗುವ ಆತಂಕ ಮೀನುಗಾರರದ್ದು. ಇದನ್ನೂ ಓದಿ: ಭಾರತ ತಲುಪಿದ ʻಗ್ರೀನ್ ಆಶಾʼ – 15,000 ಟನ್ LPG ಹೊತ್ತು ತಂದ ನೌಕೆ
ಅರಬ್ಬಿ ಸಮುದ್ರದಲ್ಲಿ ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇತ್ತ ಹಿಡಿದ ಮೀನುಗಳಿಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಕಾರವಾರ ಸೇರಿದಂತೆ ಜಿಲ್ಲೆಯ ಬಂದರಿನಲ್ಲಿ ಬೋಟುಗಳು ಸ್ತಬ್ಧವಾಗಿದ್ದು, ಮೀನುಗಾರ ಈ ಭಾರಿ ಸಂಕಷ್ಟ ಅನುಭವಿಸುವಂತಾಗಿದೆ.

