– ರೂಪಾ ಹೆಸರನ್ನು ಹೇಳಿ ಮಹಿಳೆಯಿಂದ ರೂಮ್ ಬುಕ್
– ಮಂಗಳೂರು ಮೂಲದ ಮಹಿಳೆಯ ಫೋನ್ ನಂಬರ್ ನಿಂದ ಕರೆ
ಬೆಂಗಳೂರು: ಕೆಲ ದಿನಗಳ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಬಡ ಹೆಣ್ಣು ಮಕ್ಕಳಿಗಾಗಿ ಎಂದು ಚಂದಾ ವಸೂಲಿ ಮಾಡುತ್ತಿದ್ದ ಬಗ್ಗೆ ಸೈಬರ್ ಕ್ರೈಂಗೆ ದೂರು ಕೊಟ್ಟಿದ್ದರು. ಈಗ ನಾಲ್ಕು ದಿನಗಳಲ್ಲಿ 2ನೇ ಸಲ ರೂಪಾ ಅವರು ತನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯೊಬ್ಬರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಉತ್ತರ ಪ್ರದೇಶದ ಲಕ್ನೋ ಪೊಲೀಸರಿಗೆ ಕರೆ ಮಾಡಿದ್ದಾರೆ. ನಾನು ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಮಾತನಾಡುತ್ತಿದ್ದೇನೆ. ಕೆಲಸದ ನಿಮಿತ್ತ ಲಕ್ನೋಗೆ ಬರುತ್ತಿದ್ದೇನೆ. ಡಿಸೆಂಬರ್ 29 ರಿಂದ ಜನವರಿ 3ರವರೆಗೆ ಒಳ್ಳೆಯ ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ್ದ ಅಧಿಕಾರಿ, ರೂಂ ಕೂಡ ಬುಕ್ ಮಾಡಿದ್ದರು. ಈ ಬಗ್ಗೆ ಪರಿಚಯದ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ರೂಪಾಗೆ ಕರೆ ಮಾಡಿ ವಿಚಾರಿಸಿದಾಗ ಈ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಹೆಸರಲ್ಲಿ ಹಣ ವಸೂಲಿ!
Advertisement
Advertisement
ಯಾರೋ ನಿಮ್ಮ ಹೆಸರು ಹೇಳಿಕೊಂಡು ಈ ನಂಬರ್ ನಿಂದ ಕರೆ ಮಾಡಿದ್ದರು ಎಂದು ತ್ರಿಪಾಠಿ ಅವರು ರೂಪಾ ಅವರಿಗೆ ಕರೆ ಬಂದಿದ್ದ ನಂಬರ್ ನೀಡಿದ್ದಾರೆ. ರೂಪಾ ಅವರು ಆ ನಂಬರ್ ಗೆ ಕರೆ ಮಾಡಿದಾಗ ಮಹಿಳೆ ಸರಿಯಾಗಿ ಮಾತನಾಡದ ಕಾರಣ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ಬನಶಂಕರಿ ಪೊಲೀಸ್ ಠಾಣೆಗೆ ರೂಪಾ ಅವರು ದೂರು ಕೊಟ್ಟಿದ್ದಾರೆ. ಈ ಕುರಿತು ಪೊಲೀಸರು ವಂಚನೆ ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಐಪಿಸಿ 417, 420(ವಂಚನೆ) 511 (ಅಪರಾಧ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
Advertisement
ಮೊಬೈಲ್ ಸಂಖ್ಯೆ ಪತ್ತೆ?
ಪೊಲೀಸರು ಕರೆ ಮಾಡಿದ್ದ ಮೊಬೈಲ್ ನಂಬರ್ ನ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಮಂಗಳೂರಿನ ಬಲ್ಮಠದಲ್ಲಿರುವ ಚಿರಾಗ್ ಅಪಾರ್ಟ್ಮೆಂಟ್ ನಿವಾಸಿಯ ಮಹಿಳೆಯ ನಂಬರ್ ಇದಾಗಿದೆ. ಆದರೆ ತಿಂಗಳ ಹಿಂದೆಯೇ ನನ್ನ ಮೊಬೈಲ್ ಕಳೆದುಹೋಗಿತ್ತು. ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೊಟ್ಟಿದ್ದೇನೆ. ಎಫ್ಐಆರ್ ಹಾಗೂ ದೂರು ಸ್ವೀಕೃತಿ ಅರ್ಜಿಯನ್ನು ಬಿಎಸ್ಎನ್ಎಲ್ ಕಚೇರಿಗೆ ಸಲ್ಲಿಸಿ, ಅದೇ ಸಂಖ್ಯೆಯ ಹೊಸ ಸಿಮ್ ಖರೀದಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆಯ ಹೇಳಿಕೆಯಿಂದ ಪೊಲೀಸರು ಗೊಂದಲಕ್ಕೆ ಸಿಲುಕಿಕೊಂಡಿದ್ದು, ಕರೆ ಹೋದ ದಿನ ಆ ಮೊಬೈಲ್ ಸಂಖ್ಯೆಯನ್ನು ಅದೇ ಮಹಿಳೆ ಬಳಸುತ್ತಿದ್ದರೋ? ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಪೊಲೀಸರು ಈ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆಗೆ ಇಳಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv