ಮಲ್ಲನ್ಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಬಾರಿಯೂ ಸೇರಿ, ಆರ್ಸಿಬಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. ತಂಡದ ಹಿಂದಿನ ಫೈನಲ್ ಪ್ರವೇಶದ ಹಾದಿ ಹೇಗಿತ್ತು ಎಂದು ಇಲ್ಲಿ ವಿವರಿಸಲಾಗಿದೆ.
2009 – ಫೈನಲ್ನಲ್ಲಿ ವಿರೋಚಿತ ಸೋಲು
2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಫೈನಲ್ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.
2011 ಚೆನ್ನೈ ವಿರುದ್ಧ ಎರಡೆರಡುಬಾರಿ ಸೋಲು
2011ರ ಆವೃತ್ತಿ ಆರ್ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್ಗಳ ಹೀನಾಯ ಸೋಲು ಕಂಡಿದ್ದ ಆರ್ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್ಗಳಿಂದ ಸೋಲು ಕಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
2016 – 8 ರನ್ಗಳಿಂದ ಕೈತಪ್ಪಿದ ಟ್ರೋಫಿ
2016 ಐಪಿಎಲ್ ಆವೃತ್ತಿ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್ಸಿಬಿ ಮೊದಲ ಕ್ವಾಲಿಫೈಯರ್ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್ಸಿಬಿ ಕ್ರಿಸ್ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.
2025 – ಪಂಜಾಬ್ ವಿರುದ್ಧ ಆರ್ಸಿಬಿಗೆ 8 ವಿಕೆಟ್ಗಳ ಜಯ, 4ನೇ ಬಾರಿಗೆ ಫೈನಲ್ಗೆ ಲಗ್ಗೆ
ಐಪಿಎಲ್ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಆರ್ಸಿಬಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್ಸಿಬಿ (RCB) ಫೈನಲ್ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 14.1 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಗಳಿಸಿತು. ಆರ್ಸಿಬಿ 10 ಓವರ್ಗೆ ಗುರಿ ತಲುಪಿ ಗೆದ್ದು ಬೀಗಿತು. ಈ ಬಾರಿ ಫೈನಲ್ಗೆ ಲಗ್ಗೆ ಇಟ್ಟಿರುವ ಆರ್ಸಿಬಿ ಕಪ್ ಗೆಲ್ಲುವ ಉತ್ಸಾಹದಲ್ಲಿದೆ.