10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

Public TV
2 Min Read
Bhuvneshwar Kumar

ಜೆಡ್ಡಾ: ಭುವನೇಶ್ವರ್‌ ಕುಮಾರ್‌ (Bhuvneshwar Kumar) ಮರಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡವನ್ನು ಸೇರಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್‌ ಹರಾಜು (IPL Mega Auction) ಪ್ರಕ್ರಿಯೆಯಲ್ಲಿ ವೇಗಿ ಭುವನೇಶ್ವರ್‌ ಕುಮಾರ್‌ ಅವರನ್ನು ಆರ್‌ಸಿಬಿ 10.75 ಕೋಟಿ ರೂ. ನೀಡಿ ಖರೀದಿಸಿದೆ.

ಭುವನೇಶ್ವರ್‌ ಕುಮಾರ್‌ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್‌ ಮತ್ತು ಲಕ್ನೋ ಪೈಪೋಟಿ ನಡೆಸಿತ್ತು. ಆದರೆ ಬಿಡ್‌ ಮೌಲ್ಯ 10 ಕೋಟಿ ರೂ. ದಾಟುತ್ತಿದ್ದಂತೆ ಎರಡು ತಂಡಗಳು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಆರ್‌ಸಿಬಿ , ಅಭಿಮಾನಿಗಳು ಮನವಿ ಮಾಡಿದ್ದಕ್ಕೆ ಭುವನೇಶ್ವರ್‌ ಕುಮಾರ್‌ ಅವರನ್ನು ಖರೀದಿಸಿದ್ದೇವೆ ಎಂದು ತಿಳಿಸಿದೆ.

ಹಾಗೆ ನೋಡಿದರೆ ಭುವನೇಶ್ವರ್‌ ಕುಮಾರ್‌ ಐಪಿಎಲ್‌ ಪ್ರಯಾಣ ಆರಂಭಿಸಿದ್ದೇ ಆರ್‌ಸಿಬಿಯಿಂದ. 2009 ರಲ್ಲಿ ಆರ್‌ಸಿಬಿ ಸೇರಿದ್ದ ಭುವನೇಶ್ವರ್‌ ಕುಮಾರ್‌ ಎರಡು ಆವೃತ್ತಿಗಳ ಕಾಲ ತಂಡದಲ್ಲಿದ್ದರು. ನಂತರ 2011 ರಲ್ಲಿ ಪುಣೆ ವಾರಿಯರ್ಸ್‌ ತಂಡವನ್ನು ಸೇರಿದ್ದರು. ಇದನ್ನೂ ಓದಿ: ಆರ್‌ಸಿಬಿಗೆ ಫಿಲ್‌ ಸಾಲ್ಟ್‌, ಜಿತೇಶ್‌ ಶರ್ಮಾ, ಹ್ಯಾಜಲ್‌ವುಡ್‌

ಪುಣೆ ವಾರಿಯರ್ಸ್‌ ತಂಡವನ್ನು ವಿಸರ್ಜಿಸಿದ ಬಳಿಕ 2014ರ ಐಪಿಎಲ್‌ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ 4.5 ಕೋಟಿ ರೂ. ನೀಡಿ ಭುವಿಯನ್ನು ಖರೀದಿಸಿತ್ತು. 2016ರಲ್ಲಿ ಎಸ್‌ಆರ್‌ಹೆಚ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ವೇಳೆ ಭುವಿ 23 ವಿಕೆಟ್‌ ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್‌ ಪಡೆದಿದ್ದರು. 2018 ರಲ್ಲಿ ಭುವನೇಶ್ವರ್‌ ಕುಮಾರ್‌ ಅವರನ್ನು ಉಪನಾಯಕನಾಗಿ ನೇಮಿಸಲಾಯಿತು. ಇದನ್ನೂ ಓದಿ: IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

2022ರ ಹರಾಜಿನಲ್ಲಿ ಹೈದರಾಬಾದ್‌ 4.2 ಕೋಟಿ ರೂ. ನೀಡಿ ಭುವಿಯನ್ನು ಖರೀದಿಸಿದ್ದ ಹೈದರಾಬಾದ್‌ ಈ ವರ್ಷ ತಂಡದಿಂದ ಬಿಡುಗಡೆ ಮಾಡಿತ್ತು.

Share This Article