– ಆರ್‌ಸಿಬಿ, ಸಿಎಸ್‌ಕೆ ಸೇರಿ ಹಲವು ಫ್ರ್ಯಾಂಚೈಸಿಗಳ ಜೆರ್ಸಿ ಕಳವು
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ಆರ್‌ಸಿಬಿ (RCB) ಸೇರಿ ವಿವಿಧ ಫ್ರಾಂಚೈಸಿಗಳ 6.5 ಲಕ್ಷ ರೂ. ಮೌಲ್ಯದ 261 ಜೆರ್ಸಿ ಕಳ್ಳತನವಾಗಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು (Mumbai Police) ಕ್ರೀಡಾಂಗಣದ ಸೆಕ್ಯುರಿಟಿ ಗಾರ್ಡ್‌ನನ್ನು ಬಂಧಿಸಿದ್ದಾರೆ.
ಕ್ರೀಡಾಂಗಣದ ಸೆಕ್ಯುರಿಟಿ ಗಾರ್ಡ್ ಆಗಿರುವ ಪೂರ್ವ ಮೀರಾ ರಸ್ತೆಯ ನಿವಾಸಿ ಫಾರೂಕ್ ಅಸ್ಲಂ ಖಾನ್ (46) ಬಂಧಿತ ಆರೋಪಿ. ಜೂ.13ರಂದು ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐನ (BCCI) ಅಧಿಕೃತ ಮಳಿಗೆಗೆ ಅನುಮತಿಯಿಲ್ಲದೇ ಪ್ರವೇಶಿಸಿದ್ದರಿಂದ ಎಫ್‌ಐಆರ್ (FIR) ದಾಖಲಾಗಿತ್ತು.ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು
ಇತ್ತೀಚಿಗೆ ಬಿಸಿಸಿಐ ನಡೆಸುತ್ತಿದ್ದ ಲೆಕ್ಕಪರಿಶೋಧನೆ ವೇಳೆ ಸ್ಟಾಕ್ ಕಡಿಮೆಯಿರುವುದು ಪತ್ತೆಯಾಗಿದೆ. ಬಳಿಕ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭದ್ರತಾ ಸಿಬ್ಬಂದಿ ಕಾಡ್ಬೋರ್ಡ್ ಪೆಟ್ಟಿಗೆಯೊಂದನ್ನು ಹೊತ್ತೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ನಂತರ ಜು.17ರಂದು ಬಿಸಿಸಿಐ ಉದ್ಯೋಗಿ ಹೇಮಾಂಗ್ ಭರತ್ ಕುಮಾರ್ ಅಮೀನ್ ಅವರು ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ (Marine Drive Police Station) ದೂರು ದಾಖಲಿಸಿದ್ದರು.
ದೂರಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಸೇರಿ ಇತರ ಐಪಿಎಲ್ ಫ್ರ್ಯಾಂಚೈಸಿಗಳ ಜೆರ್ಸಿಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು, 6.52 ಲಕ್ಷ ರೂ. ಮೌಲ್ಯದ 261 ಜೆರ್ಸಿಗಳನ್ನು ಕಳ್ಳತನ ಮಾಡಿರುವ ಆರೋಪದ ಮೇಲೆ 2023ರ ಬಿಎನ್‌ಎಸ್ ಸೆಕ್ಷನ್ 306ರ ಅಡಿಯಲ್ಲಿ ಸೆಕ್ಯುರಿಟಿ ಗಾರ್ಡ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಬಿಸಿಸಿಐ ಕಚೇರಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಜೆರ್ಸಿಗಳು ಬಂದಿವೆ ಎಂದು ನನಗೆ ತಿಳಿಸಿದ್ದರು. ಜೊತೆಗೆ ಆನ್‌ಲೈನ್‌ನಲ್ಲಿ ಜೂಜಾಟದಿಂದಾಗಿ ಹಣವನ್ನೆಲ್ಲಾ ಕಳೆದುಕೊಂಡಿದ್ದೆ. ಇದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಹರಿಯಾಣ ಮೂಲದ ಡೀಲರ್‌ನ ಪರಿಚಯವಾಗಿತ್ತು. ಹೀಗಾಗಿ ಹಣ ಬೇಕಿದ್ದರಿಂದ ಕೋರಿಯರ್ ಮೂಲಕ ಕಳುಹಿಸಿ ಜೆರ್ಸಿಗಳನ್ನು ಮಾರಾಟ ಮಾಡಿದೆ. ಜೊತೆಗೆ ಸ್ವಲ್ಪ ಚೌಕಾಸಿ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಆದರೆ ಈ ಡೀಲ್‌ನಿಂದ ಎಷ್ಟು ಹಣಗಳಿಸಿದ್ದಾನೆ ಎನ್ನುವ ಮಾಹಿತಿಯನ್ನು ನಿರ್ದಿಷ್ಟವಾಗಿ ಆತ ಬಹಿರಂಗಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡೀಲರ್‌ನ್ನು ವಿಚಾರಣೆ ನಡೆಸಿದಾಗ, ಈ ಜೆರ್ಸಿಗಳು ಕಳ್ಳತನದ ಮಾಲು ಎಂದು ನನಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯ ಬ್ಯಾಂಕ್ ಖಾತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ