ಅಹಮದಾಬಾದ್: 18ನೇ ಆವೃತ್ತಿಯ ಫೈನಲ್ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ (Punjab Kings) ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಬ್ಯಾಟಿಂಗ್ ಮಾಡುವ ಅವಕಾಶವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಬಿಟ್ಟುಕೊಟ್ಟಿದೆ.
ಸದ್ಯ ನರೇಂದ್ರ ಮೋದಿ ಕ್ರೀಡಾಂಗಣ ಮೊದಲು ಬೌಲಿಂಗ್ ಮಾಡುವ ತಂಡಕ್ಕೆ ಅನುಕೂಲಕರವಾಗಿದ್ದು, ಆರ್ಸಿಬಿ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!
ಎರಡು ದಶಕಗಳಿಂದ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್ಗೆ ವಿರಾಟ್ ಕೊಹ್ಲಿ (Virat Kohli) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿಂದು ಮುಖಾಮುಖಿಯಾಗುತ್ತಿದ್ದಾರೆ. ಇದರೊಂದಿಗೆ 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿದ್ದಾರೆ. ಉಭಯ ತಂಡಗಳ ನಡುವೆ ಈವರೆಗೆ 36 ಪಂದ್ಯಗಳು ನಡೆದಿದ್ದು, ಇತ್ತಂಡಗಳೂ ತಲಾ 18 ಪಂದ್ಯಗಳಲ್ಲಿ ಗೆಲುವು ಕಂಡಿವೆ. ಇದನ್ನೂ ಓದಿ: ಆರ್ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ
ಆರ್ಸಿಬಿ ಪರ ಬ್ಯಾಟಿಂಗ್ನಲ್ಲಿ ಕಿಂಗ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ ಬಲ ತುಂಬಿದ್ರೆ ಬೌಲಿಂಗ್ನಲ್ಲಿ ಮಾರಕ ವೇಗಿ ಜೋಷ್ ಹೇಜಲ್ವುಡ್, ಯಶ್ ದಯಾಳ್, ಸುಯಶ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಹೀಗೆ ತಂಡದ ಪ್ರತಿಯೊಬ್ಬ ಸದಸ್ಯನೂ ಫೈನಲ್ ತನಕದ ತಂಡದ ಪಯಣದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ಹೆಗಲು ನೀಡಿದ್ದಾರೆ. ಇಂದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಇದನ್ನೂ ಓದಿ: ನಾನು ಬೆಂಗಳೂರಿನ ಅಳಿಯ, ಗೆದ್ದು ಬಾ ಆರ್ಸಿಬಿ: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ವಿಶ್
ಅಯ್ಯರ್ ಕಡೆಗಣಿಸುವಂತಿಲ್ಲ
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಫೈನಲ್ವರೆಗೆ ಕೊಂಡೊಯ್ದಿದ್ದ, ಕೆಕೆಆರ್ಗೆ ಪ್ರಶಸ್ತಿ ತಂದುಕೊಟ್ಟಿದ್ದ ಶ್ರೇಯಸ್ ಅವರನ್ನೂ ಕಡೆಗಣಿಸುವಂತಿಲ್ಲ. 18 ವರ್ಷದ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಫೈನಲ್ಗೆ ಮುನ್ನಡೆಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷವೂ ಪಂಜಾಬ್ ತಂಡವನ್ನು ಫೈನಲ್ ತಲುಪಿಸುವ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪ್ರಶಸ್ತಿ ಗೆಲುವಿನ ಶ್ರೇಯವನ್ನು ಅಯ್ಯರ್ ನೀಡಿರಲಿಲ್ಲ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಪ್ರಭ್ಸಿಮ್ರನ್ ಸಿಂಗ್, ಜೋಷ್ ಇಂಗ್ಲಿಸ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ಅಯ್ಯರ್ ಪಡೆಗೆ ಆಸರೆ ಒದಗಿಸಿದ್ದಾರೆ. ಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡ, ಚಾಹಲ್ ಫೈನಲ್ನಲ್ಲಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
ಆರ್ಸಿಬಿ ಪ್ಲೇಯಿಂಗ್-11
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್.
ಪಂಜಾಬ್ ಪ್ಲೇಯಿಂಗ್-11
ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್, ನೆಹಲ್ ವಧೇರ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ವಿಜಯ್ ಕುಮಾರ್ ವೈಶಾಕ್, ಅಜ್ಮತುಲ್ಲಾ ಒಮರ್ಜೈ, ಕೈಲ್ ಜೆಮಿಸನ್, ಯಜುವೇಂದ್ರ ಚಹಲ್, ಅರ್ಷ್ದೀಪ್ ಸಿಂಗ್.