– ಸಂಜು ಬದಲಿಗೆ ಜಡ್ಡು, ಬ್ರೆವಿಸ್ ಕೇಳಿದ ರಾಜಸ್ಥಾನ್; ಆಫರ್ ತಿರಸ್ಕರಿಸಿದ ಸಿಎಸ್‌ಕೆ
ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ 19ನೇ ಆವೃತ್ತಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಡಿಸೆಂಬರ್ 15ರಂದು ಭಾರತದಲ್ಲೇ ಮಿನಿ ಹರಾಜು (IPL 2026 Auction) ನಡೆಯುವ ಸಾಧ್ಯತೆಗಳಿವೆ. ದುಬೈನ ಜೆಡ್ಡಾದಲ್ಲಿ ನಡೆದ ಕೊನೆಯ ಎರಡು ಹರಾಜಿಗಿಂತಲೂ ಭಿನ್ನವಾಗಿ 2026ರ ಹರಾಜು ಪ್ರಕ್ರಿಯೆಯನ್ನ ಭಾರತದಲ್ಲೇ (India) ನಡೆಸಲು ತಯಾರಿ ನಡೆಸಲಾಗುತ್ತಿದೆ. ಆದ್ರೆ ಈವರೆಗೆ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ.
ಹೀಗಾಗಿ ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು (IPL Franchise) ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡುವಂತೆ ಐಪಿಎಲ್ ಮಂಡಳಿ ಸೂಚನೆ ನೀಡಿದೆ. ಇದನ್ನೂ ಓದಿ: ಜಯ್ ಶಾ ಮಧ್ಯಪ್ರವೇಶದಿಂದ ಪ್ರತೀಕಾ ರಾವಲ್‌ಗೆ ಸಿಕ್ತು ಚಿನ್ನದ ಪದಕ
ಇದಕ್ಕೂ ಮುನ್ನ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಗೆ ಇದೇ ನವೆಂಬರ್ 27ರಂದು ದೆಹಲಿಯಲ್ಲಿ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಈಗಾಗಲೇ ಎಲ್ಲಾ 5 ಫ್ರಾಂಚೈಸಿಗಳು ನ.6ರಂದೇ ರಿಟೇನ್ ಆಟಗಾರರ ಪಟ್ಟಿಯನ್ನ ಪ್ರಕಟಿಸಿವೆ.
ಸಂಜು ಸಿಎಸ್‌ಕೆಗೆ?
ಡಿ.15ರ ಮಿನಿ ಹರಾಜಿಗೂ ಮುನ್ನವೇ ಸಂಜು ಸ್ಯಾಮ್ಸನ್ (Sanju Samson), 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್ ಕನ್ನಡಿಗರು!
ಮಿನಿ ಹರಾಜಿಗೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಸಂಜುರನ್ನ ಸಿಎಸ್‌ಕೆಗೆ ಬಿಟ್ಟುಕೊಡಲು ಮುಂದಾಗಿದೆ. ಆದ್ರೆ ಟ್ರೇಡ್ ಇನ್ ವಿಂಡೋ ನಿಯಮದ ಅಡಿಯಲ್ಲಿ ಸಂಜು ಬದಲಿಗೆ ದೈತ್ಯರಾದ ರವೀಂದ್ರ ಜಡೇಜಾ ಹಾಗೂ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನ ಬಿಟ್ಟುಕೊಡುವಂತೆ ಕೇಳಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಈ ಆಫರ್‌ನ್ನು ತಿರಸ್ಕರಿಸಿದೆ ಎನ್ನಲಾಗಿದೆ.
2012ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ರವೀಂದ್ರ ಜಡೇಜಾ, ಧೋನಿ ಬಳಿಕ ಚೈನ್ನೈ ತಂಡದ ಜೀವಾಳವೇ ಆಗಿದ್ದಾರೆ. ಆದ್ದರಿಂದಲೇ 2025ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ 18 ಕೋಟಿಗೆ ಜಡ್ಡುರನ್ನ ಉಳಿಸಿಕೊಂಡಿತು. ಇತ್ತ ರಾಜಸ್ಥಾನ್ ಕೂಡ ಸಂಜು ಸ್ಯಾಮ್ಸನ್‌ರನ್ನ 18 ಕೋಟಿಗೆ ಉಳಿಸಿಕೊಂಡಿತ್ತು. ಡೇವಾಲ್ಡ್ ಬ್ರೆವಿಸ್ 18ನೇ ಆವೃತ್ತಿಯ ಐಪಿಎಲ್‌ನಿಂದ ಸಿಎಸ್‌ಕೆ ತಂಡವನ್ನ ಸೇರಿಕೊಂಡರು. ಆರಂಭದಲ್ಲಿ ಸ್ಯಾಮ್ಸನ್ ಆರ್‌ಸಿಬಿ ಸೇರುವ ವದಂತಿ ಹಬ್ಬಿತ್ತು. ಆದ್ರೆ, ಸಿಎಸ್‌ಕೆ ಜೊತೆಗೆ ಈಗಾಗಲೇ ಎಲ್ಲಾ ಒಪ್ಪಂದ ಅಂತಿಮವಾಗಿದೆ. ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?
ಸ್ಯಾಮ್ಸನ್ ರಾಜಸ್ಥಾನ್ ತೊರೆಯಲು ಕಾರಣ ಏನು?
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್ 2025ರ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ರಿಯಾನ್ ಪರಾಗ್ ನಾಯಕನಾಗಿ ಅನೇಕ ಪಂದ್ಯಗಳನ್ನ ಮುನ್ನಡೆಸಿದ್ದರು. ಇದು ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಅಲ್ಲದೇ ಜೋಸ್ ಬಟ್ಲರ್ ಅವರನ್ನ ಫ್ರಾಂಚೈಸಿಯಿಂದ ಕೈಬಿಟ್ಟಿದ್ದು ಸಹ ಸಂಜುಗೆ ಬೇಸರ ತರಿಸಿತ್ತಂತೆ. ಹೀಗಾಗಿ 2025ರ ಟೂರ್ನಿ ಮುಗಿದ ಬೆನ್ನಲ್ಲೇ ತನ್ನನ್ನು ಹರಾಜಿನಲ್ಲಿ ಬಿಡುಗಡೆ ಮಾಡಲು ಅಥವಾ ಬೇರೆ ಫ್ರಾಂಚೈಸಿ ಜೊತೆಗೆ ವಿನಿಮಯ ಮಾಡುವಂತೆ ಕೇಳಿಕೊಂಡಿದ್ದರು. ಸಂಜು ಸಿಎಸ್‌ಕೆ ಸೇರಿಕೊಳ್ಳಲಿದ್ದು, ಧೋನಿ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ಆಗಲಿದ್ದಾರೆ ಎನ್ನಲಾಗಿದೆ.




