– ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕೆ ರಿಷಭ್ ಪಂತ್ಗೆ 30 ಲಕ್ಷ ಫೈನ್
ಲಕ್ನೋ: ಐಪಿಎಲ್ ಟೂರ್ನಿಯ ಆರ್ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ (Rishabh Pant) ಸೇರಿ ಎಲ್ಎಸ್ಜಿ (LSG) ತಂಡಕ್ಕೆ ಬಿಸಿಸಿಐ ದಂಡ ವಿಧಿಸಿದೆ.
ಮಂಗಳವಾರ ನಡೆದ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಎಲ್ಎಸ್ಜಿ ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಆರ್ಸಿಬಿ ಕ್ವಾಲಿಫೈಯರ್ 1 ಎಂಟ್ರಿಗೆ ಕೊಡುಗೆ ನೀಡಿದ ಕೊಹ್ಲಿಗೆ ದಿನೇಶ್ ಕಾರ್ತಿಕ್ ವಿಶೇಷ ಗೌರವ
ಐಪಿಎಲ್ನ ಕನಿಷ್ಠ ಓವರ್ ದರ ಅಪರಾಧಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಅಡಿಯಲ್ಲಿ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ, ರಿಷಭ್ ಪಂತ್ಗೆ 30 ಲಕ್ಷ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ XI ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.
ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್ಸಿಬಿ ವಿಕೆಟ್ಗಳ ಸೋಲನುಭವಿಸಿತು. ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಆರ್ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್ ಶರ್ಮಾ
ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು, ಆರ್ಸಿಬಿ ಎರಡು ಹೆಚ್ಚುವರಿ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ. ಆರ್ಸಿಬಿ ಗುರುವಾರ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಇತ್ತ ಮೂರನೇ ಸ್ಥಾನಕ್ಕೆ ಕುಸಿದ ಗುಜರಾತ್ ಟೈಟಾನ್ಸ್ ಶುಕ್ರವಾರ ಎಲಿಮಿನೇಟರ್ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.