– ರೋಚಕ ಹಣಾಹಣಿಯಲ್ಲಿ ರಾಜಸ್ಥಾನ್‌ಗೆ ವಿರೋಚಿತ ಸೋಲು
ಬೆಂಗಳೂರು: ಕಳೆದ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ತನ್ನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸೋಲಿನ ಮುಖವಾಡ ಕಳಚುವುದರ ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.
ಗುರುವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ 11 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಡಿರುವ ಒಂಬತ್ತು ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕೇರಿದೆ.
ಗೆಲುವಿಗೆ 206 ರನ್ ಗಳ ಕಠಿಣ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ ಕೇವಲ 194 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ 49 ರನ್ ಗಳಿಸುವ ಮೂಲಕ ಸ್ಫೋಟಕ ಆರಂಭ ಒದಗಿಸಿದರೂ ಅದನ್ನು ಕೊನೇವರೆಗೂ ಬೆಳೆಸಿಕೊಂಡು ಹೋಗುವಲ್ಲಿ ರಾಜಸ್ಥಾನ ರಾಯಲ್ಸ್ ಸಂಪೂರ್ಣವಾಗಿ ಎಡವಿತು.
ಹೇಜಲ್ವುಡ್ 4 ವಿಕೆಟ್
ಜೋಶ್ ಹೇಜಲ್ವುಡ್ ತನ್ನ ಪಾಲಿನ ಅಂತಿಮ ಓವರ್‌ನಲ್ಲಿ ಸ್ಫೋಟಕವಾಗಿ ಆಡುತ್ತಿದ್ದ ಧ್ರುವ್ ಜುರೆಲ್ (47) ಅವರು ಆರ್ ಸಿಬಿ ಪಾಳೆಯದಿಂದ ಪಂದ್ಯ ಕಿತ್ತುಕೊಳ್ಳುವ ಸೂಚನೆ ನೀಡಿದರಾದರೂ ಹೇಜಲ್ವುಡ್ ಅದಕ್ಕೆ ಅವಕಾಶ ನೀಡಲಿಲ್ಲ. ಹೇಟ್ಮೇಯರ್ (11), ಶುಭಂ ದುಬೆ (12) ಸೇರಿದಂತೆ ಯಾವ ಬ್ಯಾಟರ್ ಸಹ ಅಗತ್ಯ ಸಂದರ್ಭದಲ್ಲಿ ಆಟವಾಡಲು ವಿಫಲವಾಗಿದ್ದರಿಂದ ಆರ್‌ಸಿಬಿ ಜಯಭೇರಿ ಬಾರಿಸಿತು. ಆರ್ ಸಿಬಿ ಪರ ಹೇಜಲ್ವುಡ್ ಅವರು 33 ರನ್ ಗಳಿಗೆ 4 ವಿಕೆಟ್ ಕಬಳಿಸಿದರು. ಕೃನಾಲ್ ಪಾಂಡ್ಯ 2 ವಿಕೆಟ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ತಲಾ 1 ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಜತ್ ಪಾಟೀದಾರ್ ಬಳಗ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.
ಕೊಹ್ಲಿ- ಪಡಿಕ್ಕಲ್ ಮಿಂಚಿನಾಟ:
ಆರ್‌ಸಿಬಿ ಪವರ್ ಪ್ಲೇನಲ್ಲಿ ಸ್ಫೋಟಕ ಆರಂಭ ಪಡೆದಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್ ಅವರು 95 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 150ರ ಗಡಿದಾಟಿಸಿದರು. 16ನೇ ಓವರ್ ನಲ್ಲೇ ಆರ್ಚರ್ ಅವರು ವಿರಾಟ್ ಕೊಹ್ಲಿ ಅವರನ್ನು ಜೋಫ್ರಾ ಆರ್ಚರ್ ಅವರು ಔಟ್ ಮಾಡಿದರು. ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ 70 ರನ್ ಗಳನ್ನು ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಮುಂದಿನ ಓವರ್ ನಲ್ಲೇ ಸಂದೀಪ್ ಶರ್ಮಾ ಅವರು ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್ ಗೆ ಅಟ್ಟಿದರು.
27 ಎಸೆತಗಳಿಂದ 50 ರನ್ ಗಳಿಸಿದ ಅವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದವು. ಇದು ದೇವದತ್ ಪಡಿಕ್ಕಲ್ ಅವರ ನಿರಂತರ ಎರಡನೇ ಅರ್ಧಶತಕವಾಗಿದೆ. ಅಂತಿಮ ಹಂತದಲ್ಲಿ ಟಿಂ ಡೇವಿಡ್ (23) ಮತ್ತು ಜಿತೇಶ್ ಶರ್ಮಾ(20) ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರಾಜಸ್ಥಾನ ರಾಯಲ್ಸ್ ಪರ ಸಂದೀಪ್ ಶರ್ಮಾ 2 ವಿಕೆಟ್ ಗಳಿಸಿದರೆ, ಜೋಫ್ರಾ ಆರ್ಚರ್ ಮತ್ತು ಹಸರಂಗ ತಲಾ ಒಂದು ವಿಕೆಟ್ ಉರುಳಿಸಿದರು. ಮತ್ತೊಂದು ವಿಕೆಟ್ ರನೌಟ್ ರೂಪದಲ್ಲಿ ಬಂತು.