– ಕ್ಯಾಪ್ಟನ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್, ಹ್ಯಾಜಲ್‌ವುಡ್ ಬೆಂಕಿ ಬೌಲಿಂಗ್‌ಗೆ ಒಲಿದ ಜಯ
ಚೆನ್ನೈ: ಐಪಿಎಲ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಕೊನೆಗೂ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. 197 ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 146 ರನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಧೋನಿಗೆ ಏಜ್ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್ ಸ್ಪೀಡ್‌ನಲ್ಲಿ ಸ್ಟಂಪ್, ಸಾಲ್ಟ್ ಸ್ಟನ್!
ಚೆಪಾಕ್‌ನಲ್ಲಿ ಉಭಯ ತಂಡಗಳು ಒಟ್ಟು 10 ಪಂದ್ಯಗಳನ್ನಾಡಿವೆ. ಅದರಲ್ಲಿ ಚೆನ್ನೈ 8 ಹಾಗೂ ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಸಂಭ್ರಮಿಸಿದೆ.
ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತ್ತು. ಪಿಲ್ ಸಾಲ್ಟ್ ಆರಂಭದಲ್ಲೇ ಸಿಕ್ಸರ್, ಬೌಂಡರಿಗಳೊಂದಿಗೆ ಅಬ್ಬರಿಸಿದರು. 16 ಬಾಲ್‌ಗೆ 5 ಫೋರ್, 1 ಸಿಕ್ಸರ್‌ನೊಂದಿಗೆ 32 ರನ್ ಗಳಿಸಿದರು. ಆದರೆ, ಧೋನಿ ಮಾಡಿದ ಮ್ಯಾಜಿಕ್ ಸ್ಟಂಪ್‌ಗೆ ಔಟಾಗಿ ನಿರ್ಗಮಿಸಿದ್ದು, ಆರ್‌ಸಿಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಈ ವೇಳೆ ವಿರಾಟ್ ಕೊಹ್ಲಿಗೆ ದೇವದತ್ ಪಡಿಕ್ಕಲ್ ಜೊತೆಯಾದರು. 2 ಸಿಕ್ಸರ್, 2 ಫೋರ್ ಬಾರಿಸಿ ಭರವಸೆ ಮೂಡಿಸಿದ್ದ ಪಡಿಕ್ಕಲ್ 27 ರನ್ ಗಳಿಸಿ ಔಟಾದರು. ಆಗ ಕೊಹ್ಲಿಗೆ ಕ್ಯಾಪ್ಟನ್ ರಜತ್ ಪಾಟೀದಾರ್ ಜೊತೆಯಾದರು. ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ 30 ಬಾಲ್‌ಗೆ 31 ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಇದನ್ನೂ ಓದಿ: ಶೀಘ್ರದಲ್ಲೇ ಬಿಸಿಸಿಐ ಕೇಂದ್ರ ಗುತ್ತಿಗೆ – ಮತ್ತೆ ಶ್ರೇಯಸ್, ಇಶಾನ್ ಕಿಶನ್ ಕಂಬ್ಯಾಕ್?
ಈ ವೇಳೆ ಏಕಾಂಗಿ ಹೋರಾಟ ನಡೆಸಿದ ಪಾಟೀದಾರ್ ಅರ್ಧಶತಕ ಗಳಿಸಿ (32 ಬಾಲ್, 51 ರನ್, 4 ಫೋರ್, 3 ಸಿಕ್ಸರ್) ತಂಡದ ಮೊತ್ತ ಹೆಚ್ಚಿಸಿದರು. ಈ ಮಧ್ಯೆ ಲಿಯಾಮ್ ಲಿವಿಂಗ್‌ಸ್ಟೋನ್ಸ್ 10, ಜಿತೇಶ್ ಶರ್ಮಾ 12 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಕೊನೆ ಘಳಿಗೆಯಲ್ಲಿ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೊನೆ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. 3 ಸಿಕ್ಸರ್, 1 ಫೋರ್‌ನೊಂದಿಗೆ ಕೇವಲ 8 ಬಾಲ್‌ಗೆ 22 ರನ್ ಗಳಿಸಿ ಡೇವಿಡ್ ಮಿಂಚಿದರು. ಚೆನ್ನೈ ಪರ ನೂರ್ ಅಹ್ಮದ್ 3, ಮಥೀಷ ಪತಿರಾನ 2, ಖಲೀಲ್ ಅಹ್ಮದ್ ಮತ್ತು ಆರ್.ಅಶ್ವಿನ್ ತಲಾ 1 ವಿಕೆಟ್ ಕಿತ್ತರು.
ಆರ್‌ಸಿಬಿ ನೀಡಿದ 197 ರನ್ ಗುರಿ ಬೆನ್ನತ್ತಿದ ಸಿಎಸ್‌ಕೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಬೆಂಗಳೂರು ಬೌಲರ್‌ಗಳ ದಾಳಿಗೆ ಚೆನ್ನೈ ಬ್ಯಾಟರ್‌ಗಳು ಮಂಕಾದರು. ಮೊದಲ ಓವರ್‌ನಲ್ಲೇ ರಾಹುಲ್ ತ್ರಿಪಾಠಿ (5), ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ (0) ವಿಕೆಟ್ ಕಿತ್ತು ಹ್ಯಾಜಲ್‌ವುಡ್ ಅಬ್ಬರಿಸಿದರು. ಬಳಿಕ ಬಂದ ದೀಪಕ್ ಹೂಡಾ (4), ಸ್ಯಾಮ್ ಕರ್ರನ್ (8) ಬ್ಯಾಟಿಂಗ್ ಮ್ಯಾಜಿಕ್ ಮಾಡುವಲ್ಲಿ ವಿಫಲರಾದರು. ರಚಿನ್ ರವೀಂದ್ರ ಏಕಾಂಗಿ ಹೋರಾಟ ಕೂಡ ನಡೆಯಲಿಲ್ಲ. ರವೀಂದ್ರ 31 ಬಾಲ್‌ಗೆ 41 ರನ್ ಗಳಿಸಿ (5 ಫೋರ್) ಔಟಾದರು. ಈ ಹೊತ್ತಿಗೆ ಬಹುತೇಕ ಪಂದ್ಯ ಆರ್‌ಸಿಬಿ ಕೈವಶ ಎನ್ನುವಂತಾಯಿತು.
ಶಿವಂ ದುಬೆ 19 ರನ್ ಗಳಿಸಿ ಔಟಾದರು. ಈ ವೇಳೆ ಜೊತೆಯಾದ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಚೆನ್ನೈ ಅಭಿಮಾನಿಗಳಿಗೆ ಬ್ಯಾಟಿಂಗ್ ಮನರಂಜನೆ ನೀಡಿದರು. ಜಡೇಜಾ 25 ರನ್ ಗಳಿಸಿದರು. ಕೊನೆ ಓವರ್‌ನಲ್ಲಿ ಸಿಕ್ಸರ್, ಫೋರ್ ಬ್ಯಾಟಿಂಗ್ ಮಾಡಿದ ಧೋನಿ 16 ಬಾಲ್‌ಗೆ 30 ರನ್ ಗಳಿಸಿದರು. ಕೊನೆಗೆ ಚೆನ್ನೈ 8 ವಿಕೆಟ್ ನಷ್ಟದೊಂದಿಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿತು.