– ಆರ್‌ಸಿಬಿ ಹೊಡೆತಕ್ಕೆ ನಲುಗಿರೋ ಚೆನ್ನೈಗೆ ಮತ್ತೊಂದು ಸೋಲಿನ ಆಘಾತ
ಗುವಾಹಟಿ: ನಿತಿಶ್ ರಾಣಾ ಸ್ಫೋಟಕ ಬ್ಯಾಟಿಂಗ್ ಹಾಗೂ ವನಿಂದು ಹಸರಂಗ ಸ್ಪಿನ್ ಜಾದು ನೆರವಿನಿಂದ ಚೆನ್ನೈ ವಿರುದ್ಧ ರಾಜಸ್ಥಾನ್ 6 ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲೂ ಓಪನರ್ ಯಶಸ್ವಿ ಜೈಸ್ವಾಲ್ (4) ಬ್ಯಾಟಿಂಗ್ ವೈಫಲ್ಯ ಅನುಭಸಿದರು. ಸಂಜು ಸ್ಯಾಮ್ಸನ್ ಕೂಡ 20 ರನ್ ಗಳಿಸಿ ಔಟಾದರು. ಈ ವೇಳೆ ತಂಡಕ್ಕೆ ಆಸರೆಯಾದ ನಿತಿಶ್ ರಾಣಾ ಫೋರ್, ಸಿಕ್ಸರ್‌ಗಳ ಸ್ಫೋಟಕ ಬ್ಯಾಟಿಂಗ್ ಆಡಿದರು. 36 ಬಾಲ್‌ಗೆ 10 ಫೋರ್, 5 ಸಿಕ್ಸರ್‌ನೊಂದಿಗೆ 81 ರನ್ ಕಲೆಹಾಕಿದರು. ಕ್ಯಾಪ್ಟನ್ ರಿಯಾನ್ ಪರಾಗ್ ಕೂಡ 37 ರನ್‌ಗಳ ಜವಾಬ್ದಾರಿಯುತ ಆಟವಾಡಿದರು. ಹೆಟ್ಮೇಯರ್ 19 ರನ್ ಗಳಿಸಿದರು. ಅಂತಿಮವಾಗಿ ತಂಡ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
ಚೆನ್ನೈ ಪರ ಖಲೀಲ್ ಅಹ್ಮದ್, ನೂರ್ ಅಹ್ಮದ್, ಮಥೆಶಾ ಪಥಿರಾನ ತಲಾ 2 ಹಾಗೂ ಆರ್.ಅಶ್ವಿನ್, ರವಿಂದ್ರ ಜಡೇಜಾ ತಲಾ 1 ವಿಕೆಟ್ ಕಿತ್ತರು.
ರಾಜಸ್ಥಾನ್ ನೀಡಿದ್ದ 183 ರನ್ ಗುರಿ ಬೆನ್ನತ್ತಿದ ಚೆನ್ನೈ ಆರಂಭಿಕ ಆಘಾತ ಎದುರಿಸಿತು. ಮೊದಲ ಓವರ್‌ನಲ್ಲೇ ರಚಿನ್ ರವೀಂದ್ರ ಕ್ಯಾಚ್ ನೀಡಿ ಔಟಾಗಿ ನಿರ್ಗಮಿಸಿದರು. ಈ ವೇಳೆ, ರಾಹುಲ್ ತ್ರಿಪಾಠಿ ಮತ್ತು ಋತುರಾಜ್ ಗಾಯಕ್ವಾಡ್ ಜೊತೆಯಾಗಿ ಭರವಸೆ ಮೂಡಿಸಿದರು. ತ್ರಿಪಾಠಿ 23 ರನ್‌ಗಳಿಸಿ ನಿರ್ಗಮಿಸಿದರು. ಶಿವಂ ದುಬೆ ಕೂಡ 18 ರನ್‌ಗಳಿಗೆ ಔಟಾದರು. ಏಕಾಂಗಿ ಹೋರಾಟ ನಡೆಸಿದ ಗಾಯಕ್ವಾಡ್ 44 ಬಾಲ್‌ಗೆ 7 ಫೋರ್, 1 ಸಿಕ್ಸರ್‌ನೊಂದಿಗೆ 63 ರನ್ ಗಳಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು.
ರವೀಂದ್ರ ಜಡೇಜಾ (32) ಕೊನೆ ವರೆಗಿನ ಹೋರಾಟ ವ್ಯರ್ಥವಾಯಿತು. ಕೊನೆಯಲ್ಲಿ ಧೋನಿ (16) ತಂಡಕ್ಕೆ ಭರವಸೆಯಾಗಿದ್ದರು. ಆದರೆ, ಕೊನೆ ಹಂತದಲ್ಲಿ ಒಂದು ಸಿಕ್ಸರ್ ಹೊಡೆದು ಮತ್ತೊಂದು ದೊಡ್ಡ ಹೊಡೆತಕ್ಕೆ ಧೋನಿ ಮುಂದಾದರು. ಆದರೆ, ಡೈ ಹೊಡೆದು ಹೆಟ್ಮೇಯರ್ ಕ್ಯಾಚ್ ಹಿಡಿದರು. ಇದು ಸಿಎಸ್‌ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಕೊನೆಗೆ ಸಿಎಸ್‌ಕೆ ವಿರುದ್ಧ ರಾಜಸ್ಥಾನ್ 6 ರನ್‌ಗಳ ಜಯ ಸಾಧಿಸಿತು.
ರಾಜಸ್ಥಾನ್ ಪರ ವನಿಂದು ಹಸರಂಗ 4 ವಿಕೆಟ್ ಕಿತ್ತು ಮಿಂಚಿದರು. ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ ತಲಾ 1 ವಿಕೆಟ್ ಪಡೆದರು.