ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ ನಿಮಯ (Impact Player Rule) ಮತ್ತೆ ಬಿಸಿಬಿಸಿ ಚರ್ಚೆಯಲ್ಲಿದೆ.
2024ರ ಐಪಿಎಲ್ ಟೂರ್ನಿ ಬಳಿಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಅನೇಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ ಹೊರಹಾಕಿದ್ದರು. ಮುಂದಿನ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ನಿಯಮ ಕೈಬಿಡುವಂತೆ ಒತ್ತಾಯಗಳೂ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಧ್ಯಕ್ಷ ಅರುಣ್ ಧುಮಾಲ್, ರೋಹಿತ್ ಶರ್ಮಾ ಈ ಹಿಂದೆಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ನ್ಯೂನತೆ ತೋರಿಸಿದ್ದಾರೆ. ಪ್ರತಿಯೊಂದು ನಿಯಮಕ್ಕೂ ಅದರದ್ದೇ ಆದ ಸಾಧಕ ಬಾಧಕಗಳಿವೆ. ಪ್ರಸ್ತುತ ಐಪಿಎಲ್ ಸೀಸನ್ ಮುಗಿದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ನಿಯಮದ ಕುರಿತು ಪರಿಶೀಲಿಸಲಿದೆ ಎಂದು ಹೇಳಿದ್ದರು.
ಈ ನಡುವೆ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin), ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಬ್ಯಾಟ್ ಬೀಸಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತುಂಬಾ ಕೆಟ್ಟದ್ದಲ್ಲ ಅಂತ ನಾನು ಭಾವಿಸುತ್ತೇನೆ. ಈ ನಿಯಮದಿಂದ ಆಲ್‌ರೌಂಡರ್‌ಗಳನ್ನ ನಿರುತ್ಸಾಹಗೊಳಿಸುವುದಿಲ್ಲ. ಹೊಸ ತನಕ್ಕೆ ಅವಕಾಶ ನೀಡುವ ಜೊತೆಗೆ, ಆಟವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಉದಾಹರಣೆಯನ್ನೂ ನೀಡಿದ್ದಾರೆ.
2024ರ ಕ್ವಾಲಿಫೈಯರ್-2ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವನ್ನು ಎದುರಿಸಿತ್ತು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ (Sunrisers Hyderabad) ತಂಡವು 9 ವಿಕೆಟ್‌ಗೆ 175 ರನ್ ಗಳಿಸಿತ್ತು. ರಾಜಸ್ಥಾನ್ ತಂಡ 36 ರನ್‌ಗಳಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ಶಹಬಾಜ್ ಅಹ್ಮದ್ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್‌ನಲ್ಲಿ 18 ರನ್ ಗಳಿಸಿ ಬೌಲಿಂಗ್‌ನಲ್ಲಿ 3 ಪ್ರಮುಖ ವಿಕೆಟ್ ಕಿತ್ತು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಈ ನಿಯಮ ಇರುವುದರಿಂದಲೇ ಬಹಳ ಆಟಗಾರರು ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗಿದೆ. ಮುಖ್ಯವಾಗಿ ಇಂಪ್ಯಾಕ್ಟ್ ನಿಯಮ ಇಲ್ಲದೇ ಇದ್ದಿದ್ದರೇ, ಧ್ರುವ್ ಜುರೆಲ್, ಶಿವಂ ದುಬೆ, ಶಬಹಾಜ್ ಅಹ್ಮದ್ ಅಂತಹ ಆಟಗಾರರು ಎಂದಿಗೂ ಅವಕಾಶ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.
ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಅಭಿಷೇಕ್ ಪೋರೆಲ್ ಇಂಪ್ಯಾಕ್ಟ್ ಆಟಗಾರನಾದಮೇಲೆ ಆರಂಭಿಕನಾಗಿ ಕಣಕ್ಕಿಳಿದು ಅಬ್ಬರಿಸಿದ್ದರು.
ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಒಬ್ಬ ಬ್ಯಾಟ್ಸ್‌ಮನ್ ಬದಲಿಗೆ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇದರಿಂದ ಉಭಯ ತಂಡಗಳಿಗೆ ಒಬ್ಬ ಬ್ಯಾಟ್ಸ್‌ಮನ್ ಮತ್ತು ಬೌಲರ್ ಹೆಚ್ಚುವರಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಒಟ್ಟು ನಾಲ್ಕು ಜನ ಮೀಸಲು ಆಟಗಾರರು ಇರುವುದರಿಂದ ಪ್ಲೇಯಿಂಗ್-11 ನಲ್ಲಿರುವ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಮತ್ತೊಬ್ಬರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳುವ ಅವಕಾಶವೂ ಇದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದಿದ್ದು ಯಾವಾಗ?
ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೊದಲು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಬಿಸಿಸಿಐ, ಐಪಿಎಲ್ ಟೂರ್ನಿಯಲ್ಲಿ ಅಳವಡಿಸಲು ನಿರ್ಧರಿಸಿತು. ಆದ್ರೆ ಐಪಿಎಲ್‌ಗೂ ಮುನ್ನ 2022-23ರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿ ಈ ನಿಯಮವನ್ನು ಅಳವಡಿಸಿಕೊಂಡು ಪ್ರಯೋಗ ನಡೆಸಿತ್ತು. ಅದು ಸಕ್ಸಸ್ ಆದ ನಂತರ ಕಳೆದ ಎರಡು ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಅನುಷ್ಠಾನಕ್ಕೆ ತರಲಾಯಿತು.
ಈ ಹಿಂದೆ ರೋಹಿತ್ ಶರ್ಮಾ ಹೇಳಿದ್ದೇನು?
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ನಾನು ಅಭಿಮಾನಿಯಲ್ಲ. ಜನರಿಗೆ ಸ್ವಲ್ಪ ಮನರಂಜನೆ ನೀಡುವ ಸಲುವಾಗಿ ಪಂದ್ಯದ ದೊಡ್ಡ ಭಾಗವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ. ಆದರೆ, ನೀವು ಕ್ರಿಕೆಟ್‌ನ ನಿಜವಾದ ಅಂಶವನ್ನು ನೋಡುವುದಾದರೆ, ನಾನು ಕೆಲವೊಂದು ಉದಾಹರಣೆ ನೀಡುತ್ತೇನೆ. ಭಾರತ ತಂಡಕ್ಕೆ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಅವರಂಥ ಆಟಗಾರರು ಬೌಲ್ ಮಾಡುವುದೇ ಇಲ್ಲ. ಹಾಗಾಗಿ ಇದು ಒಳ್ಳೆಯ ಸಂಗತಿಯಲ್ಲ. ಈ ನಿಯಮದಿಂದ ನೀವು ಏನು ಸಾಧಿಸುತ್ತೀರೋ ನನಗೆ ಗೊತ್ತಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದರು.