-ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಗ್ಲೆನ್
ಚಂಡೀಗಢ: ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (Glenn Maxwell) ಐಪಿಎಲ್ (IPL) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ (BCCI) ಪಂದ್ಯದ ಶೇ.25 ರಷ್ಟು ದಂಡ ವಿಧಿಸಿದೆ.
ಏ.8 ರಂದು ಪಂಜಾಬ್‌ನ (Punjab) ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Maharaja Yadavindra Singh International Cricket Stadium) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವೆ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಬಿಸಿಸಿಐ ಪಂದ್ಯದ ಶೇ.25 ರಷ್ಟು ಶುಲ್ಕ ಪಾವತಿಸುವಂತೆ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಈ ಸೀಸನ್‌ನಲ್ಲಿ ದಂಡಕ್ಕೆ ಒಳಗಾದ ಆರನೇ ಆಟಗಾರರಾಗಿದ್ದಾರೆ.ಇದನ್ನೂ ಓದಿ: ಆರ್ಯನ ಆರ್ಭಟಕ್ಕೆ ಚೆನ್ನೈ ಉಡೀಸ್; ಪಂಜಾಬ್‌ಗೆ 18 ರನ್‌ಗಳ ಜಯ
ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ಬಿಸಿಸಿಐ ನಿರ್ದಿಷ್ಟ ಕಾರಣ ತಿಳಿಸಿಲ್ಲವಾದರೂ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಇದೇ ರೀತಿ ಅಪರಾಧ ಮಾಡಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದ ಸಮಯದಲ್ಲಿ ಗುಜರಾತ್ ಟೈಟಾನ್ಸ್ (Gujrat Titans) ಆಟಗಾರ ಇಶಾಂತ್ ಶರ್ಮಾಗೆ (Ishant Sharma) ದಂಡ ವಿಧಿಸಲಾಗಿತ್ತು.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.2ರ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗಪಡಿಸಿಕೊಂಡರೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ ಉದ್ದೇಶಪೂರ್ವಕವಾಗಿ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು ಮತ್ತು ಅಜಾಗರೂಕತೆಯಿಂದ ಅಥವಾ ನಿರ್ಲಕ್ಷ್ಯದಿಂದ ಜಾಹೀರಾತು ಫಲಕಗಳು, ಡ್ರೆಸ್ಸಿಂಗ್ ಕೋಣೆಯ ಬಾಗಿಲು, ಕನ್ನಡಿ, ಕಿಟಕಿಗಳು ಮತ್ತು ಇತರ ನೆಲೆವಸ್ತುಗಳು ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟುಮಾಡುವುದು ಮತ್ತು ಆಟಗಾರನು ಹತಾಶೆಯಿಂದ ಬ್ಯಾಟ್‌ನ್ನು ತೀವ್ರವಾಗಿ ಬೀಸಿ ಹಾನಿಯನ್ನುಂಟು ಮಾಡಿದಾಗ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ.
ಈ ಸೀಸನ್‌ನಲ್ಲಿ ದಿಗ್ವೇಶ್ ಸಿಂಗ್, ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಸೇರಿದಂತೆ ಹಲವಾರು ಆಟಗಾರರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹಾಗೂ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್‌ಗಳ ರೋಚಕ ಗೆಲುವು ಸಾಧಿಸಿದ್ದು, ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್ 219 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 201 ರನ್ ಗಳಿಸಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ಅಬ್ಬರದಿಂದ ಸಿಎಸ್‌ಕೆ ಸೋಲುವಲ್ಲಿ ಕಾರಣವಾಯಿತು. ಸಿಎಸ್‌ಕೆ ವಿರುದ್ಧದ ಗೆಲುವಿನೊಂದಿಗೆ ಪಿಬಿಕೆಎಸ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಈ ಸೀಸನ್‌ನಲ್ಲಿ ಸತತ ನಾಲ್ಕನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ