ಮುಂಬೈ: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ವಿರುದ್ಧ ತವರಿನಲ್ಲಿ ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಧೋನಿ ಪಡೆ ನೀಡಿದ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗೆ 1 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.
ಚೆನ್ನೈ ಉತ್ತಮ ಆರಂಭ ಪಡೆಯಲಿಲ್ಲ. ರಚಿನ್ ರವೀಂದ್ರ ಕೇವಲ 5 ರನ್ ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಶೇಖ್ ರಶೀದ್ 19, ಆಯುಷ್ ಮ್ಹಾತ್ರೆ 32 ರನ್ ಅಷ್ಟೇ ಗಳಿಸಿದರು. ಶಿವಂ ದುಬೆ (50), ರವೀಂದ್ರ ಜಡೇಜಾ (53) ಅರ್ಧಶತಕ ಗಳಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 176 ರನ್ ಗಳಿಸಿತ್ತು. ಮುಂಬೈ ಪರ ಬುಮ್ರಾ 2, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಅಶ್ವನಿ ಕುಮಾರ್ ತಲಾ 1 ವಿಕೆಟ್ ಕಿತ್ತರು.
ಬ್ಯಾಟಿಂಗ್‌ನಲ್ಲಿ ಮುಂಬೈ ಅಬ್ಬರಿಸಿತು. ಓಪನರ್‌ಗಳಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್, ರೋಹಿತ್ ಶರ್ಮಾ ಸಿಕ್ಸ್, ಫೋರ್‌ಗಳಿಂದ ಅಬ್ಬರಿಸಿದರು. ಈ ಜೋಡಿ 40 ಬಾಲ್‌ಗೆ 63 ರನ್ ಜೊತೆಯಾಟ ಕಲೆಹಾಕಿತು. ಈ ನಡುವೆ ರಿಕೆಲ್ಟನ್ 24 ರನ್ ಗಳಿಸಿ ಔಟಾದರು.
ಆಗ ಹಿಟ್ ಮ್ಯಾನ್‌ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಈ ಜೋಡಿ ಚೆನ್ನೈ ಬೌಲರ್‌ಗಳ ಬೆವರಿಳಿಸಿತು. 54 ಬಾಲ್‌ಗೆ 114 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿ ಮಿಂಚಿದರು. ರೋಹಿತ್ ಶರ್ಮಾ 45 ಬಾಲ್‌ಗೆ 6 ಸಿಕ್ಸ್, 4 ಫೋರ್‌ಗಳೊಂದಿಗೆ 76 ರನ್ ಸಿಡಿಸಿದರು. ಸೂರ್ಯ 30 ಬಾಲ್‌ಗೆ 5 ಸಿಕ್ಸ್, 6 ಫೋರ್‌ಗಳೊಂದಿಗೆ 68 ರನ್ ಗಳಿಸಿದರು. ಇಬ್ಬರೂ ಔಟಾಗದೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.