IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

Public TV
3 Min Read
Vignesh Puthur 2

ದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2025) 18ನೇ ಆವೃತ್ತಿಯಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲಾರಂಭಿಸಿವೆ. ಅತ್ತ ಬಿಸಿಸಿಐನಿಂದ (BCCI) ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಶಾನ್ ‌ಕಿಶನ್‌ ಶತಕ ಸಿಡಿಸಿ ಅಬ್ಬರಿಸಿದ್ರೆ, ಇದೇ ಚೊಚ್ಚಲ ಐಪಿಎಲ್‌ ಪಂದ್ಯವನ್ನಾಡಿದ ಕೇರಳ ಮೂಲದ ಯುವಕ ಸದ್ಯ ಕ್ರಿಕೆಟ್‌ ಲೋಕದಲ್ಲಿ ಸುದ್ದಿಯಲ್ಲಿದ್ದಾರೆ.

ಸೂಪರ್‌ ಸಂಡೇ ಚೆಪಾಕ್‌ನಲ್ಲಿ ನಡೆದ ಐಪಿಎಲ್‌ನ 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ (CKS) 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು. ಆದ್ರೆ ಈ ಪಂದ್ಯದಲ್ಲಿ ಮಿಂಚಿದ್ದು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಕೇರಳ ಮೂಲದ ಯುವಕ ʻವಿಘ್ನೇಶ್‌ ಪುತ್ತೂರುʼ (Vignesh Puthur).

Vignesh Puthur 3

ಹೌದು. ಕೇರಳದ ಮಲಪ್ಪುರಂನ 24 ವರ್ಷದ ವಿಘ್ನೇಶ್‌, ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ. ಸೂಪರ್‌ ಸಂಡೇ ರೋಹಿತ್ ಶರ್ಮಾ (Rohit Sharma) ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವಿಘ್ನೇಶ್ ತಮ್ಮ ಸ್ಪಿನ್‌ ಮೋಡಿಯಿಂದ ಆಕರ್ಷಿಸಿದರು. ಸ್ವಾರಸ್ಯವೆಂದರೆ ವಿಘ್ನೇಶ್‌ ಕೇರಳ ಪರ ಹಿರಿಯರ ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿದವರಲ್ಲ. ಆದರೂ ಘಟಾನುಘಟಿಗಳ ಅಖಾಡಕ್ಕೆ ಧುಮುಕಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು, ಫೀಲ್ಡಿಂಗ್‌ನಲ್ಲೂ ವಿಘ್ನೇಶ್‌ ಗಮನ ಸೆಳೆದಿದ್ದು ವಿಶೇಷ.

ಮುಂಬೈ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇರಳದ ಮೂಲದ ವಿಘ್ನೇಶ್‌ ಪುತ್ತೂರು, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಅವರ ಬಳಿ ಸ್ವತಃ ಧೋನಿಯೇ ಹೋಗಿ ಭುಜ ತಟ್ಟಿ ಶ್ಲಾಘಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದು ವಿಘ್ನೇಶ್‌ ಸಂತಸಗೊಂಡರು.

Vignesh Puthur 1

ಯಾರು ಈ ವಿಘ್ನೇಶ್‌ ಪುತ್ತೂರು?
ವಿಘ್ನೇಶ್‌ ಪುತ್ತೂರು ಬಲಗೈ ಬ್ಯಾಟರ್‌ ಹಾಗೂ ಎಡಗೈ ಸ್ಪಿನ್ ಬೌಲರ್‌. 2001ರ ಮಾರ್ಚ್‌ 2 ರಂದು ಜನಿಸಿದ ವಿಘ್ನೇಶ್ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. 14 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಕೇರಳ ಪರ ಮಾತ್ರ ಆಡಿದ್ದಾರೆ. ಇನ್ನೂ ಹಿರಿಯರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡಿದ್ದು, ಮೂರು ಪಂದ್ಯಗಳಿಂದ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದರು. ಈ ಮಧ್ಯೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಆಡಿದ್ದಾರೆ.

Vignesh Puthur

ಹೆತ್ತವರ ಪ್ರೋತ್ಸಾಹವೇ ಶ್ರೀರಕ್ಷೆ
ವಿಘ್ನೇಶ್ ಬೆಳವಣಿಗೆ ಹಿಂದೆ ಹೆತ್ತವರ ಪ್ರೋತ್ಸಾಹವಿದೆ. ಆರ್ಥಿಕ ಸವಾಲುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ವಿಘ್ನೇಶ್‌, ಎಂದಿಗೂ ಕ್ರೀಡೆಯ ಮೇಲಿನ ತನ್ನ ಆಸಕ್ತಿ ಕಡಿಮೆ ಮಾಡಿಕೊಂಡಿರಲಿಲ್ಲ. ತಂದೆ ಸುನಿಲ್ ಕುಮಾರ್ ಆಟೋ ಚಾಲಕರಾಗಿದ್ದರೆ, ತಾಯಿ ಕೆ.ಪಿ. ಬಿಂದು ಗೃಹಿಣಿ. ಆರಂಭದಲ್ಲಿ ಮಧ್ಯಮ ವೇಗ ಮತ್ತು ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳುತ್ತಲೇ ಇದ್ದರು. ನಂತರ ಅವರು ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತ್ರಿಶೂರ್‌ಗೆ ತೆರಳಿದರು. ಅಲ್ಲಿ ಸೇಂಟ್ ಥಾಮಸ್ ಕಾಲೇಜಿನ ಪರ ಕೇರಳ ಕಾಲೇಜು ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಪಾದಾರ್ಪಣೆ ಮಾಡುವ ಮೊದಲು 2025ರ ಟಾಟಾ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷ ರೂ.ಗೆ ಹರಾಜಾದರು.

Ruturaj Gaikwad Rachin Ravindra

ದಕ್ಷಿಣ ಆಫ್ರಿಕಾಗೆ ತೆರಳಿದ್ದ ವಿಘ್ನೇಶ್‌
ವಿಘ್ನೇಶ್ ಪುತ್ತೂರು ಅವರನ್ನು SA T20 ಲೀಗ್‌ಗಾಗಿ ಮುಂಬೈ ಕೇಪ್‌ಟೌನ್‌ನೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು. ಈ ಟೂರ್ನಿಯಲ್ಲಿ ರಶೀದ್‌ ಖಾನ್‌, ಟ್ರೆಂಟ್‌ ಬೌಲ್ಡ್‌ ಅವರಂತಹ ದಿಗ್ಗಜ ಬೌಲರ್‌ಗಳೊಂದಿಗೆ ಸಮಯ ಕಳೆದ ವಿಘ್ನೇಶ್‌ ಬೌಲಿಂಗ್‌ ಟ್ರಿಕ್ಸ್‌ ಕಲಿತು ದೇಶಕ್ಕೆ ಮರಳಿದ್ದರು. ಇದೇ ಅವಕಾಶ ಇಂದು ಅವರನ್ನು ದೇಶಾದ್ಯಂತ ಮೆಚ್ಚುಗೆ ಗಳಿಸುವಂತೆ ಮಾಡಿದೆ. ಸೋಷಿಯಲ್‌ ಮಿಡಿಯಾ ಎಕ್ಸ್‌ನಲ್ಲೂ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದಾರೆ.

Share This Article