– ಆರ್‌ಸಿಬಿಗೆ 7 ವಿಕೆಟ್‌ಗಳ ಜಯ
ಮೊಹಲಿ: ವಿರಾಟ್ ಕೊಹ್ಲಿ (Virat Kohli), ದೇವದತ್ ಪಡಿಕ್ಕಲ್ ಅಮೋಘ ಡಬಲ್ ಫಿಫ್ಟಿ ಆಟಕ್ಕೆ ಪಂಜಾಬ್ ಕಿಂಗ್ಸ್ (PBKS) ಸೋತು ಶರಣಾಯಿತು. ಕಿಂಗ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ (RCB) ತವರಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಮೊಹಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಪಂಜಾಬ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. 157 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಪಡೆ ಉತ್ತಮ ಆರಂಭ ಪಡೆದುಕೊಂಡಿತ್ತು. ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಭರವಸೆ ಮೂಡಿಸಿದ್ದರು. ತಂಡದ ಮೊತ್ತ 42 ರನ್ ಇದ್ದಾಗ ಮೊದಲ ವಿಕೆಟ್ ಬಿದ್ದಿತು. 22 ರನ್ ಗಳಿಸಿ ಆರ್ಯ ಔಟಾದರು. ಇವರ ಬೆನ್ನಲ್ಲೇ ಸಿಂಗ್ ಕೂಡ (33) ವಿಕೆಟ್ ಒಪ್ಪಿಸಿ ಹೊರ ನಡೆದರು. ಇವರ ಬಳಿಕ ಆರ್‌ಸಿಬಿ ಬೌಲರ್‌ಗಳು ಸಾಲು ಸಾಲು ವಿಕೆಟ್ ಉರುಳಿಸಿದರು.
ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೇವಲ 6 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಜೋಶ್ ಇಂಗ್ಲಿಸ್ 29, ಶಶಾಂಕ್ ಸಿಂಗ್ 31, ಮಾರ್ಕೊ ಜಾನ್ಸೆನ್ 25 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು. ಪರಿಣಾಮವಾಗಿ ಪಂಜಾಬ್ 157 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ, ಸುಯಶ್ ಶರ್ಮಾ ತಲಾ 2 ವಿಕೆಟ್ ಪಡೆದರು.
ಪಂಜಾಬ್ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಫಾರ್ಮ್‌ನಲ್ಲಿರುವ ಓಪನರ್ ಫಿಲ್ ಸಾಲ್ಟ್ ಕೇವಲ 1 ರನ್‌ಗೆ ಔಟಾಗಿದ್ದು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಯಿತು. ಈ ನಡುವೆ ಜವಾಬ್ದಾರಿಯುತ ಆಟವಾಡಿದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಜೋಡಿ ಕಿಂಗ್ಸ್ ಬೌಲರ್‌ಗಳನ್ನು ಬೆಂಡೆತ್ತಿತು. ಪಡಿಕ್ಕಲ್ 35 ಬಾಲ್‌ಗೆ 5 ಫೋರ್, 4 ಸಿಕ್ಸರ್‌ನೊಂದಿಗೆ 61 ರನ್ ಗಳಿಸಿದರು. ಕೊಹ್ಲಿ ಬೌಟಾಗದೇ 54 ಬಾಲ್‌ಗೆ 7 ಫೋರ್, 1 ಸಿಕ್ಸರ್‌ನೊಂದಿಗೆ 73 ರನ್ ಬಾರಿಸಿದರು. ಈ ಜೋಡಿ 69 ಬಾಲ್‌ಗೆ 103 ರನ್‌ಗಳ ಅಮೋಘ ಜೊತೆಯಾಟವಾಡಿತು.
ರಜತ್ ಪಾಟೀದಾರ್ 12, ಜಿತೇಶ್ ಶರ್ಮಾ 11 (ಔಟಾಗದೇ) ರನ್ ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 18.5 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ದಾಖಲಿಸಿತು.