ಅಹ್ಮದಾಬಾದ್: ಸಾಯಿ ಸುದರ್ಶನ್ ಅರ್ಧಶತಕ ಆಟ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ವಿರುದ್ಧ ಟೈಟನ್ಸ್ 36 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಜಯದ ಹಳಿಗೆ ಗುಜರಾತ್ ಮರಳಿದೆ. ಆದರೆ, ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಮುಂಬೈ ಮುಖಭಂಗ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 140 ರನ್ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಕಳೆದ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ ಇಂದು ಕೂಡ ಮಂಕಾದರು. ಕೇವಲ 8 ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ರಯಾನ್ ರಿಕೆಲ್ಟನ್ ಕೂಡ 6 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ 39 ರನ್ ಗಳಿಸಲಷ್ಟೇ ಶಕ್ತರಾದರು.
ಈ ನಡುವೆ ಸೂರ್ಯಕುಮಾರ್ ಯಾದವ್ (48 ರನ್, 28 ಬಾಲ್, 1 ಫೋರ್, 4 ಸಿಕ್ಸರ್) ಜವಾಬ್ದಾರಿಯುತ ಆಟ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ಹೊರನಡೆದಿದ್ದು, ನಿರಾಸೆ ಮೂಡಿಸಿತು. ರಾಬಿನ್ ಮಿಂಜ್ 3, ಹಾರ್ದಿಕ್ ಪಾಂಡ್ಯ 11, ನಮನ್ ಧೀರ್ 18, ಮಿಚೆಲ್ ಸ್ಯಾಂಟ್ನರ್ 18 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಗುಜರಾತ್ ಪರ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 2, ಕಗಿಸೊ ರಬಾಡ ಹಾಗೂ ಸಾಯಿ ಕಿಶೋರ್ ತಲಾ 1 ವಿಕೆಟ್ ಕಿತ್ತು ಗೆಲುವಿಗೆ ಸಹಕಾರಿಯಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಉತ್ತಮ ಪ್ರದರ್ಶನ ನೀಡಿತು. ಸಾಯಿ ಸುದರ್ಶನ್ ಅರ್ಧಶತಕ (63 ರನ್, 41 ಬಾಲ್, 4 ಫೋರ್, 2 ಸಿಕ್ಸರ್) ಗಳಿಸಿ ಮಿಂಚಿದರು. ಶುಭಮನ್ ಗಿಲ್ 38, ಜೋಶ್ ಬಟ್ಲರ್ 39 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾದರು.