IPL 2025 | ಗೆಲುವಿನ ವಿದಾಯ ಹೇಳಿದ ಡೆಲ್ಲಿ ಕ್ಯಾಪಿಟಲ್ಸ್‌ – ಪಂಜಾಬ್‌ ವಿರುದ್ಧ 6 ವಿಕೆಟ್‌ಗಳ ಜಯ

Public TV
3 Min Read
Delhi Capitals

ಜೈಪುರ: ಸಂಘಟಿತ ಬೌಲಿಂಗ್‌ ಬ್ಯಾಟಿಂಗ್‌ ಪ್ರದರ್ಶನದ ನೆರವಿನೊಂದಿಗೆ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಆರು ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದೆ. ಆದ್ರೆ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಪಡೆದಿರುವ ಪಂಜಾಬ್‌ 2ನೇ ಸ್ಥಾನ ಕಾಯ್ದುಕೊಂಡಿದೆ.

ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ 66ನೇ ಐಪಿಎಲ್ (IPL 2025) ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ಮೂಲಕ ಡೆಲ್ಲಿಗೆ 207 ರನ್‌ಗಳ ಗುರಿ ನೀಡಿತು. ಪಂಜಾಬ್ ತಂಡ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ ಗೆಲುವು ಸಾಧಿಸಿತು.

Sameer Rizvi Delhi Capitals

ತಂಡದಿಂದ ಮೊದಲು ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟವಾಡಿ 33 ಎಸೆತಗಳಿಗೆ 55 ರನ್ ಗಳಿಸಿಕೊಟ್ಟರು. ಕೆಎಲ್ ರಾಹುಲ್ 21 ಎಸೆತಕ್ಕೆ 35 ರನ್ (6 ಬೌಂಡರಿ, 1 ಸಿಕ್ಸ್) ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರೇ, ತಂಡದ ನಾಯಕ ಫಾಫ್ ಡುಪ್ಲೆಸಿಸ್ 15 ಎಸೆತಗಳಿಗೆ 23 ರನ್ (2 ಬೌಂಡರಿ, 1 ಸಿಕ್ಸ್) ಗಳಿಸಿ ಔಟಾದರು. ಸೇದಿಕುಲ್ಲಾ ಅಟಲ್ 16 (22) ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕರುಣ್ ನಾಯರ್ 27 ಎಸೆತಗಳಿಗೆ 44 ರನ್ (5 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ ಹಾಗೂ ಸಮೀರ್ ರಿಜ್ವಿ ಜೊತೆಯಾಟವಾಡಿ 30 ಎಸೆತಗಳಿಗೆ 62 ರನ್ ಗಳಿಸಿಕೊಟ್ಟು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಿಜ್ವಿ 25 ಎಸೆತಗಳಿಗೆ 58 ರನ್ (3 ಬೌಂಡರಿ, 5 ಸಿಕ್ಸ್) ಗಳಿಸಿಕೊಟ್ಟು ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Punjab Kings

ಮೊದಲಿಗೆ ಫೀಲ್ಡಿಗಿಳಿದ ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ 9 ಎಸೆತಗಳಿಗೆ 6 ರನ್ (1 ಫೋರ್) ಗಳಿಸಿ ಔಟಾದರು. ಬಳಿಕ ಪ್ರಭಸಿಮ್ರನ್ ಸಿಂಗ್ ಹಾಗೂ ಜೋಶ್ ಇಂಗ್ಲಿಸ್ ಜೊತೆಯಾಟವಾಡಿ 21 ಎಸೆತಗಳಿಗೆ 47 ರನ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಜೋಶ್ ಇಂಗ್ಲಿಸ್ 12 ಎಸೆತಗಳಿಗೆ 32 ರನ್ (3 ಫೋರ್, 2 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಪ್ರಭಸಿಮ್ರನ್ 18 ಎಸೆತಗಳಿಗೆ 28 ರನ್ (4 ಫೋರ್, 1 ಸಿಕ್ಸ್) ಗಳಿಸಿ ಔಟಾದರು. ಶಶಾಂಕ್ ಸಿಂಗ್ 10 (11) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ತಂಡದ ನಾಯಕ ಶ್ರೇಯಸ್ ಅಯ್ಯರ್ 34 ಎಸೆತಗಳಿಗೆ 53 ರನ್ (5 ಫೋರ್, 2 ಸಿಕ್ಸ್) ಕಲೆಹಾಕಿ ಮಿಂಚಿದರು. ಶ್ರೇಯಸ್ ಐಯ್ಯರ್ ಹಾಗೂ ನೇಹಲ್ ವಧೇರಾ ಜೊತೆಯಾಟವಾಡಿ 28 ಎಸೆತಗಳಿಗೆ 41 ರನ್ ಗಳಿಸಿಕೊಟ್ಟರು. ನೇಹಲ್ ವಧೇರಾ 16 (16) ರನ್ ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ 16 ಬಾಲ್‌ಗಳಿಗೆ 44 ರನ್ (3 ಫೋರ್, 4 ಸಿಕ್ಸ್) ಹಾಗೂ ಹರ್‌ಪ್ರೀತ್ ಬ್ರಾರ್ 2 (7) ರನ್ ಗಳಿಸಿ ಅಜೇಯರಾಗಿ ಉಳಿದರು.

Shreyas Iyer 1

ಡೆಲ್ಲಿ ಪರವಾಗಿ ಮುಸ್ತಾಫಿಜುರ್ ರಹಮಾನ್ 3 ವಿಕೆಟ್ ಕಿತ್ತರು. ವಿಪ್ರಾಜ್ ನಿಗಮ್ ಹಾಗೂ ಕುಲದೀಪ್ ಯಾದವ್ ತಲಾ ವಿಕೆಟ್ ಪಡೆದರು. ಮುಕೇಶ್ ಕುಮಾರು ಒಂದು ವಿಕೆಟ್ ಕಿತ್ತರು. ಪಂಜಾಬ್ ತಂಡದ ಪರ ಹರ್‌ಪ್ರೀತ್ ಬ್ರಾರ್ 2 ವಿಕೆಟ್ ಕಿತ್ತರೇ, ಮಾರ್ಕೋ ಜಾನ್ಸೆನ್ ಮತ್ತು ಪ್ರವೀಣ್ ದುಬೆ ತಲಾ ಒಂದು ವಿಕೆಟ್ ಕಿತ್ತರು.

Share This Article