– 18ನೇ ಆವೃತ್ತಿಯ ಐಪಿಎಲ್‌ಗೆ ಗೆಲುವಿನ ವಿದಾಯ ಹೇಳಿದ ಚೆನ್ನೈ
ಅಹಮದಾಬಾದ್: ಸಿಡಿಲಬ್ಬರದ ಬ್ಯಾಟಿಂಗ್, ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಗುಜರಾತ್ ಟೈಟಾನ್ಸ್ (Gujart Titans) ವಿರುದ್ಧ 83 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ತನ್ನ ಕೊನೆಯ ಪಂದ್ಯವಾಡಿದ ಸಿಎಸ್‌ಕೆ ಅದ್ಭುತ ಗೆಲುವಿನೊಂದಿಗೆ 18ನೇ ಆವೃತ್ತಿಗೆ ವಿದಾಯ ಹೇಳಿದೆ. ಇನ್ನೂ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಗುಜರಾತ್ ಟೈಟಾನ್ಸ್ ಹೀನಾಯ ಸೋಲಿನಿಂದ ನಂ.1 ಪಟ್ಟ ಕಳೆದುಕೊಳ್ಳುವ ಆತಂಕದಲ್ಲಿದೆ.
ಹೌದು.. ಈಗಾಗಲೇ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಸಿವೆ. ಆದ್ರೆ ನಾಲ್ಕು ತಂಡಗಳ ನಡುವೆ ನಂ.1 ಪಟ್ಟಕ್ಕೆ ಹಣಾಹಣಿ ನಡೆಯುತ್ತಿದೆ. ಸದ್ಯ 14 ಪಂದ್ಯಗಳಲ್ಲಿ 9 ಗೆಲುವಿನೊಂದಿಗೆ 18 ಅಂಕ ಪಡೆದುಕೊಂಡಿರುವ ಟೈಟಾನ್ಸ್ ಅಗ್ರಸ್ಥಾನದಲ್ಲಿದೆ. ಉಳಿದ ಮೂರು ತಂಡಗಳಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವ ಕಾರಣ ಗುಜರಾತ್ ಟೈಟಾನ್ಸ್‌ಗೆ ನಂ.1 ಸ್ಥಾನ ತಪ್ಪುವ ಆತಂಕದಲ್ಲಿದೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು, ಆರ್‌ಸಿಬಿ ಲಕ್ನೋ ವಿರುದ್ಧ ಉತ್ತಮ ರನ್‌ರೇಟ್‌ನಿಂದ ಗೆದ್ದರೆ, ಆರ್‌ಸಿಬಿಯೇ ನಂ.1 ಪಟ್ಟಕ್ಕೇರುವ ಅವಕಾಶವಿದೆ. ಇಲ್ಲದಿದ್ದರೆ, ಮೊದಲೆರಡು ಸ್ಥಾನಗಳು ಮುಂಬೈ ಮತ್ತು ಪಂಜಾಬ್ ಕಿಂಗ್ಸ್ ಪಾಲಾಗುವ ಸಾಧ್ಯತೆಯಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 67ನೇ ಐಪಿಎಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಸಿಎಸ್‌ಕೆ ತಂಡ ಬ್ಯಾಟಿಂಗ್ ಆಯ್ದುಕೊಂಡು 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿತು. 231 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 18.3 ಓವರ್‌ಗಳಿಗೆ 147 ರನ್‌ಗಳಿಗೆ ಸರ್ವಪತನ ಕಂಡಿತು.
ಗುಜರಾತ್ ತಂಡದಿಂದ ಮೊದಲಿಗೆ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಜೊತೆಯಾಟಾವಾಡಿ 15 ಎಸೆತಗಳಿಗೆ 24 ರನ್ ಗಳಿಸಿದರು. ಶುಭಮನ್ ಗಿಲ್ 9 ಎಸೆತಗಳಿಗೆ 13 ರನ್ (1 ಬೌಂಡರಿ, 1 ಸಿಕ್ಸ್) ಗಳಿಸಿ ಔಟಾದರು. ಬಳಿಕ ಕ್ರೀಸ್‌ಗಿಳಿದ ಜೋಸ್ ಬಟ್ಲರ್ 5 ರನ್ ಗಳಿಸಿ ಔಟಾದರೇ, ಶೆರ್ಫೇನ್ ರುದರ್‌ಫೋರ್ಡ್ ಯಾವುದೇ ರನ್ ಗಳಿಸದೇ ಪೆವಿಲಿಯನ್‌ಗೆ ಮರಳಿದರು. ಬಳಿಕ ಶಾರುಖ್ ಖಾನ್ ಹಾಗೂ ಸಾಯಿ ಸುದರ್ಶನ್ ಜೊತೆಯಾಟವಾಡಿ 34 ಎಸೆತಗಳಿಗೆ 55 ರನ್ ಕಲೆಹಾಕಿದರು. ಶಾರುಖ್ ಖಾನ್ 15 ಎಸೆತಗಳಿಗೆ 19 ರನ್ (2 ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರೇ, ಸಾಯಿ ಸುದರ್ಶನ್ 28 ಎಸೆತಗಳಿಗೆ 41 ರನ್ (6 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರಶೀದ್ ಖಾನ್ 8 ಎಸೆತಗಳಿಗೆ 12 ರನ್ (1 ಬೌಂಡರಿ, 1 ಸಿಕ್ಸ್) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಗೆರಾಲ್ಡ್ ಕೋಟ್ಜಿ 5 ಎಸೆತಗಳಿಗೆ 5 ರನ್ ಗಳಿಸಿ ಔಟಾದರು. ರಾಹುಲ್ ತೆವಾಟಿಯಾ 10 ಎಸೆತಗಳಿಗೆ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅರ್ಶದ್ ಖಾನ್ 14 ಎಸೆತಗಳಿಗೆ 20 ರನ್ ಗಳಿಸಿ ಔಟಾದರೆ, ಸಾಯಿ ಕಿಶೋರ್ 7 ಎಸೆತಗಳಿಗೆ 3 ರನ್ ಗಳಿಸಿ ಆಲೌಟ್ ಆದರು. ಮೊಹಮ್ಮದ್ ಸಿರಾಜ್ 4 ಎಸೆತಗಳಿಗೆ 3 ರನ್ ಗಳಿಸಿದರು.
ಸಿಎಸ್‌ಕೆ ತಂಡದಿAದ ಮೊದಲು ಬ್ಯಾಟ್ ಬೀಸಿದ ಆಯುಷ್ ಮ್ಹಾತ್ರೆ ಹಾಗೂ ಡೆವೊನ್ ಕಾನ್ವೆ ಜೊತೆಯಾಟವಾಡಿ 22 ಎಸೆತಗಳಿಗೆ 44 ರನ್ ಕಲೆಹಾಕಿದರು. ಆಯುಷ್ 17 ಎಸೆತಗಳಿಗೆ 34 ರನ್ (3 ಬೌಂಡರಿ, 3 ಸಿಕ್ಸ್) ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರು. ಬಳಿಕ ಡೆವೊನ್ ಹಾಗೂ ರ‍್ವಿಲ್ ಪಟೇಲ್ ಜೊತೆಯಾಟವಾಡಿ 34 ಎಸೆತಗಳಿಗೆ 63 ರನ್ ಗಳಿಸಿ ತಂಡವನ್ನು ಮುನ್ನಡೆಸಿದರು. ಉರ್ವಿಲ್ ಪಟೇಲ್ 19 ಎಸೆತಗಳಿಗೆ 37 ರನ್ (4 ಬೌಂಡರಿ, 2 ಸಿಕ್ಸ್) ಗಳಿಸಿ ಔಟಾದರು. ಬಳಿಕ ಶಿವಂ ದುಬೆ ಹಾಗೂ ಡೆವೊನ್ ಕಾನ್ವೆ ಜೊತೆಯಾಟದಲ್ಲಿ 19 ಬಾಲ್‌ಗಳಿಗೆ 37 ರನ್ ಗಳಿಸಿಕೊಟ್ಟರು. ಹಾಗೂ ಶಿವಂ ದುಬೆ 8 ಎಸೆತಗಳಿಗೆ 17 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಡೆವೊನ್ ಕಾನ್ವೆ 35 ಎಸೆತಗಳಿಗೆ 52 ರನ್ (6 ಫೋರ್, 2 ಸಿಕ್ಸ್) ಸಿಡಿಸಿ ಮಿಂಚಿದರು. ಡೆವಾಲ್ಡ್ ಬ್ರೇವಿಸ್ 23 ಎಸೆತಗಳಿಗೆ 57 ರನ್ (4 ಬೌಂಡರಿ, 5 ಸಿಕ್ಸ್) ಗಳಿಸಿ ಗಮನ ಸೆಳೆದರು. ರವೀಂದ್ರ ಜಡೆಜಾ 18 ಬಾಲ್‌ಗಳಿಗೆ 21 ರನ್‌ಗಳಿಸಿ ಅಜೇಯರಾಗಿ ಉಳಿದು ಆಟ ಮುಗಿಸಿದರು.
ಗುಜರಾತ್ ಪರ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಿತ್ತರೆ, ಸಾಯಿ ಕಿಶೋರ್, ರಶೀದ್ ಖಾನ್ ಹಾಗೂ ಶಾರುಖ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಸಿಎಸ್‌ಕೆ ಪರ ನೂರ್ ಅಹ್ಮದ್ ಹಾಗೂ ಅನ್ಶುಲ್ ತಲಾ 3 ವಿಕೆಟ್ ಪಡೆದರೆ, ರವೀಂದ್ರ ಜಡೆಜಾ 2 ವಿಕೆಟ್ ಹಾಗೂ ಖಲೀಲ್ ಅಹ್ಮದ್ ಹಾಗೂ ಮಥೀಶಾ ಪತಿರಾನ ತಲಾ 1 ವಿಕೆಟ್ ಕಿತ್ತರು.