IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

Public TV
1 Min Read
IPL 2024

– ಫ್ರಾಂಚೈಸಿಗಳಿಗೆ 5 ಆಟಗಾರರನ್ನು ಉಳಿಸಿಕೊಳ್ಳಲು ಸಿಗುತ್ತಾ ಅವಕಾಶ?

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಮೊದಲು ಐಪಿಎಲ್‌ ಫ್ರಾಂಚೈಸಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವು ಕುತೂಹಲ ಮೂಡಿಸಿದೆ.

ಬಿಸಿಸಿಐ ಐಪಿಎಲ್‌ ಮೆಗಾ ಹರಾಜಿನ ಮೊದಲು, ಐಪಿಎಲ್‌ ಫ್ರಾಂಚೈಸಿಗಳು ಐದು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಬಹುದು. ಯಾವುದೇ ರೈಟ್‌ ಟು ಮ್ಯಾಚ್‌ ಆಯ್ಕೆ ಲಭ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ನಡೆದರೆ ಮುಂಬೈ ಇಂಡಿಯನ್ಸ್‌ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ.

MUMBAI INDIANS

ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ ಸ್ಟಾರ್‌ಗಳೊಂದಿಗೆ ಮುಂದುವರಿಯಬಹುದು. ಅಲ್ಲದೇ, ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳಿಗೂ ಇದರಿಂದ ಅನುಕೂಲ ಆಗಲಿದೆ.

ಐಪಿಎಲ್ ಮೆಗಾ ಹರಾಜು ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಬೋರ್ಡ್ ಫಾರ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಸಿಐ) ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ.

BCCI

ಐಪಿಎಲ್‌ನ 10 ಫ್ರಾಂಚೈಸಿ ತಂಡಗಳ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿದೆ. ಈ ಸಭೆಯಲ್ಲಿ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 5 ಅಥವಾ 6 ಕ್ಕೆ ಹೆಚ್ಚಿಸಬೇಕು ಎಂಬ ಪ್ರಾಸ್ತಾಪ ಬಿಸಿಸಿಐ ಮುಂದಿದೆ. ಬಿಸಿಸಿಐ ಮನವಿ ಪರಿಗಣಿಸಿದ್ದು, ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

ಐಪಿಎಲ್‌ ಕಳೆದ ಹತ್ತು ವರ್ಷಗಳಲ್ಲಿ ಎರಡು ದೊಡ್ಡ ಹರಾಜುಗಳನ್ನು ನಡೆಸಿದೆ. ಮೊದಲ ಪ್ರಮುಖ ಹರಾಜು 2014 ರಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳಲ್ಲಿ 2018 ಮತ್ತು 2022 ರಲ್ಲಿ ಎರಡು ಮೆಗಾ ಹರಾಜು ಪ್ರಕ್ರಿಯೆ ನಡೆದಿವೆ.

Share This Article