ಬೆಂಗಳೂರು: ರನ್ ಮಿಷಿನ್, ಕ್ರಿಕೆಟ್ ಲೋಕದ ಕಿಂಗ್ ಎಂದೇ ಗುರುತಿಸಿಕೊಂಡಿರುವ ಆರ್‌ಸಿಬಿ (RCB) ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ (Virat Kohli) ಅವರು ನೀಡಿದ ಹೇಳಿಕೆಯೊಂದು ಭಾರೀ ಸಂಚಲನ ಸೃಷ್ಟಿಸಿದೆ.
ಹೌದು.. ವಿಶೇಷ ಸಂದರ್ಶನವೊಂದರಲ್ಲಿ ಕೊಹ್ಲಿ ಮಾತನಾಡುತ್ತಾ, ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ತಮ್ಮ ವೃತ್ತಿಜೀವನದ ಅಂತಿಮ ದಿನವನ್ನು ನೋಡಲೇಬೇಕು ಎಂದು ತಮ್ಮ ನಿವೃತ್ತಿಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದು ಕೋಟ್ಯಂತರ ಕೊಹ್ಲಿ ಅಭಿಮಾನಿಗಳನ್ನು (Kohli Fans) ಆತಂಕಕ್ಕೆ ದೂಡಿದೆ.
ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದೇನು?
ಏಕೆ ಇಷ್ಟೊಂದು ಹಸಿವಿನಿಂದ ಓಡುತ್ತಿದ್ದೀರಿ ಎಂದು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಒಬ್ಬ ಕ್ರೀಡಾಪಟು ಇಂದಲ್ಲ ನಾಳೆ ತಮ್ಮ ವೃತ್ತಿಜೀವನದ ಅಂತಿಮ ದಿನಾಂಕ ನೋಡಲೇಬೇಕು. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ನೀವೃತ್ತಿಯ ಬಳಿಕ ನಾನು ಸಾಧನೆ ಮಾಡದರ ಕುರಿತು ಚಿಂತಿಸಬಾರದು. ಅಂತಹ ಪರಿಸ್ಥಿತಿ ನನಗೆ ಬರಲೇಬಾರದು. ಅದಕ್ಕಾಗಿ ನಾನು ಇಂದು ಅದ್ಭುತ ಆಟ ಆಡಲೇಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೈವೋಲ್ಟೇಜ್ ಕದನ ವಾಷ್‌ಔಟ್ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!
ಮುಂದುವರಿದು, ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಯಾವುದೇ ವಿಷಾದ ನನ್ನನ್ನು ಕಾಡಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಕ್ರಿಕೆಟ್ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದ್ದಾರೆ.
2022ರ ಟಿ20 ವಿಶ್ವಕಪ್ ಬಳಿಕ ಟಿ20ಗೆ ಹಾಗೂ 2023ರ ಏಕದಿನ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ಕೊಹ್ಲಿ ವಿದಾಯ ಹೇಳುತ್ತಾರೆ ಎಂಬ ಮಾತುಗಳು ಕ್ರಿಕೆಟ್ ತಜ್ಞರಿಂದ ಕೇಳಿಬಂದಿತ್ತು. ಆದ್ರೆ ಈಗ ಕೊಹ್ಲಿ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ.
ಸದ್ಯ 2024ರ ಐಪಿಎಲ್ ಆವೃತ್ತಿಯಲ್ಲಿ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ 13 ಪಂದ್ಯಗಳಲ್ಲಿ 66.10 ಸರಾಸರಿ, 155.16 ಸ್ಟ್ರೈಕ್‌ರೇಟ್‌ನೊಂದಿಗೆ 661 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳೂ ಸೇರಿವೆ. ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಟ್ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್ ಲೋಗೋ