– ಅಫ್ಘಾನಿಸ್ತಾನ ವಿರುದ್ಧದ ಟಿ20ಗೂ ಹಾರ್ದಿಕ್ ಪಾಂಡ್ಯ ಅಲಭ್ಯ
ಮುಂಬೈ: ಪಾದದ ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಮುಂಬರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 ಸರಣಿ ಹಾಗೂ 2024ರ ಐಪಿಎಲ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಟೈಟಾನ್ಸ್‌ನಿಂದ (Gujarat Taitans) ಟ್ರೇಡ್ ವಿಂಡೋ (ಆಟಗಾರರ ಬದಲಾವಣೆ ಮಾಡಿಕೊಳ್ಳುವ ನಿಯಮ) ಮೂಲಕ ಮುಂಬೈ ಇಂಡಿಯನ್ಸ್‌ಗೆ (Mumbai Indians) ಮರಳಿ ನಾಯಕತ್ವ ಪಡೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವುದು ಫ್ರಾಂಚೈಸಿಗೆ ತಲೆನೋವು ಉಂಟುಮಾಡಿದೆ. ಇದನ್ನೂ ಓದಿ: ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್ ಭಾವುಕ
Advertisement
Advertisement
2023ರ ಏಕದಿನ ವಿಶ್ವಕಪ್ (World Cup) ಟೂರ್ನಿ ವೇಳೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಹಾರ್ದಿಕ್ ಅವರ ಎಸೆತವನ್ನು ಸ್ಟ್ರೈಟ್‌ಡ್ರೈವ್ ಮಾಡಿದಾಗ, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಪಾಂಡ್ಯ ಕಾಲು ಉಳುಕಿಸಿಕೊಂಡಿದ್ದರು. ನಂತರ ಪೆವಿಲಿಯನ್‌ಗೆ ಹಿಂದಿರುಗಿದರೂ ಮೈದಾನಕ್ಕೆ ಮರಳಲಿಲ್ಲ. ಅಂತಿಮವಾಗಿ ಅವರು ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.
Advertisement
Advertisement
ಅಲ್ಲದೆ, ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗೂ ಅಲಭ್ಯರಾದರು. ಇದೀಗ ಗಾಯದ ಸಮಸ್ಯೆ ಮತ್ತೆ ಗಂಭೀರವಾಗುತ್ತಿದ್ದು, 2024ರ ಜನವರಿಯಲ್ಲಿ ನಿಗದಿಯಾಗಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು
ಮತ್ತೊಂದೆಡೆ ಮಾರ್ಚ್ ಅಂತ್ಯದಲ್ಲಿ ಆರಂಭವಾಗುವ 2024ರ ಐಪಿಎಲ್ ಟೂರ್ನಿಯ ಒಳಗಾಗಿ ಅವರು ಸಂಪೂರ್ಣ ಗುಣಮುಖರಾಗುವುದು ಅನುಮಾನ ಎಂಬ ವಿಷಯಗಳು ಕೇಳಿಬರುತ್ತಿದೆ. ಇದರಿಂದ ಪಾಂಡ್ಯ ಐಪಿಎಲ್‌ನಿಂದಲೇ ಹೊರಗುಳಿಯಬಹುದು, ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಹಾರ್ದಿಕ್ ಅಲಭ್ಯರಾದ್ರೆ ನಾಯಕ ಯಾರು?
10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ 5 ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಬಿಟ್ಟು ಹಾರ್ದಿಕ್ ಪಾಂಡ್ಯಗೆ ಮಿನಿ ಹರಾಜಿಗೂ ಮುನ್ನ ನಾಯಕತ್ವ ಹಸ್ತಾಂತರಿಸಲಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದರೂ ಮುಂಬೈ ಇಂಡಿಯನ್ಸ್ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿತ್ತು. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಇದರಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ಫ್ಯಾನ್ಸ್ ಮುಂಬೈ ಇಂಡಿಯನ್ಸ್‌ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು. ಒಂದು ವೇಳೆ ಹಾರ್ದಿಕ್ ಪಾಂಡ್ಯ ಐಪಿಎಲ್‌ಗೆ ಅಲಭ್ಯರಾದರೆ, ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈ ವೇಳೆ ರೋಹಿತ್ ಶರ್ಮಾ ಅವರನ್ನೇ ನಾಯಕತ್ವದಲ್ಲಿ ಮುಂದುವರಿಯುವಂತೆ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್ ಒತ್ತಾಯಿಸಬಹುದು ಎಂದು ಹೇಳಲಾಗಿದೆ.