ಬೆಂಗಳೂರು: ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ವಿರುದ್ಧ ಅಖಾಡಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀನಾಯ ಸೋಲಿಗೆ ತುತ್ತಾಗಿದೆ. ಆದ್ರೆ ತವರಿನಲ್ಲೇ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಹೊಸ ನಾಯಕನ ನೇತೃತ್ವದಲ್ಲಿ ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
188 ರನ್‌ಗಳ ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಸ್ಫೋಟಕ ಪ್ರದರ್ಶನ ನೀಡಲು ಮುಂದಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 1 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಅಭಿಷೇಕ್ ಪೋರೆಲ್ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇನ್ನೂ 8 ಎಸೆತಗಳಲ್ಲಿ 21 ರನ್ (2 ಸಿಕ್ಸರ್, 2 ಬೌಂಡರಿ) ಬಾರಿಸಿದ್ದ ಫ್ರೆಸರ್ ಮೆಕ್‌ಗಾರ್ಕ್ ಸಹ ವಿಕೆಟ್ ಒಪ್ಪಿಸಿದರು. ಮೊದಲ 6 ಓವರ್‌ಗಳಲ್ಲಿ 54 ರನ್ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
Advertisement
ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಟ್ರಿಸ್ಟಾನ್ಸ್ ಸ್ಟಬ್ಸ್ ಬೂಸ್ಟ್ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ತಂಡ ಇತ್ತು. ಆದ್ರೆ ಅನಗತ್ಯವಾಗಿ ಒಂದು ರನ್ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದು ಡೆಲ್ಲಿ ತಂಡಕ್ಕೆ ತುಂಬಲಾರದ ನಷ್ಟವಾಯಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್ ಪಂತ್ ಅವರ ಅನುಪಸ್ಥಿತಿ ಸಹ ಡೆಲ್ಲಿ ತಂಡವನ್ನು ಕಾಡಿತು.
Advertisement
ಇನ್ನೂ ಏಕಾಂಗಿ ಹೋರಾಟ ನಡೆಸಿದ ನಾಯಕ ಅಕ್ಷರ್ ಪಟೇಲ್ 39 ಎಸೆತಗಳಲ್ಲಿ 57 ರನ್ (3 ಸಿಕ್ಸರ್, 5 ಬೌಂಡರಿ) ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರು ಕ್ರೀಸ್‌ನಲ್ಲಿ ಉಳಿಯದ ಕಾರಣ ಆರ್‌ಸಿಬಿ ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನುಳಿದಂತೆ ಶಾಯ್ ಹೋಪ್ 29 ರನ್, ಕುಮಾರ್ ಕುಮಾರ್ ಕುಶಾರ್ಗ 2 ರನ್, ಸ್ಟಬ್ಸ್ 3 ರನ್, ರಸಿಕ್ ಸಲಾಮ್ 10 ರನ್, ಮುಕೇಶ್ ಕುಮಾರ್ 3 ರನ್, ಕುಲ್ದೀಪ್ ಯಾದವ್ 3 ರನ್ ಗಳಿಸಿ ಔಟಾದರು.
Advertisement
ಇದಕ್ಕೂ ಮುನ್ನ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ಆಟಗಾರರು 200 ರನ್‌ಗಳನ್ನು ತಲುಪುವಲ್ಲಿ ವಿಫಲರಾದರು. ರಜತ್ ಪಾಟೀದಾರ್ ಸ್ಫೋಟಕ ಅರ್ಧಶತಕ, ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ ಸ್ಫೋಟಲ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿತ್ತು. ಈ ಮೂಲಕ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತ್ತು.
ಮೊದಲಿಗೆ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 6 ರನ್ ಗಳಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಕೇವಲ 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 27 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ಅಬ್ಬರಿಸಿದ ಪಾಟೀದಾರ್-ಜ್ಯಾಕ್ಸ್:
ಕೇವಲ 36 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್‌ಸಿಬಿ ತಂಡಕ್ಕೆ 3ನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿಲ್ ಜ್ಯಾಕ್ಸ್ ಕೇವಲ 53 ಎಸೆತಗಳಲ್ಲಿ 88 ರನ್‌ಗಳ ಜೊತೆಯಾಟ ನೀಡುವ ಮೂಲಕ ಬಲ ತುಂಬಿದರು. ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಪಾಟೀದಾರ್ ಕೇವಲ 29 ಎಸೆತಗಳಲ್ಲೇ 5ನೇ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಪಾಟೀದಾರ್ 32 ಎಸೆತಗಳಲ್ಲಿ 52 ರನ್ (3 ಸಿಕ್ಸರ್, 3 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್ ಜ್ಯಾಕ್ಸ್ 41 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸರ್) ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಕ್ರೀಸ್‌ಗಿಳಿದ ಕ್ಯಾಮರೂನ್ ಗ್ರೀನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 24 ಎಸೆತ ಎದುರಿಸಿದ ಗ್ರೀನ್ ಅಜೇಯ 32 ರನ್ (1 ಬೌಂಡರಿ, 2 ಸಿಕ್ಸರ್) ಬಾರಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ಭರ್ಜರಿಯಾಗಿ ರನ್ ಗಳಿಸಿತಾದರೂ ಉತ್ತಮವಾಗಿ ಫಿನೀಶ್ ಮಾಡಲು ಸಾಧ್ಯವಾಗಲಿಲ್ಲ. ಮಹಿಪಾಲ್ ಲೋಮ್ರಾರ್ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿರ್ಣಾಯಕ ಘಟ್ಟದಲ್ಲಿ ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಬೀಳುವಂತೆ ಮಾಡಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್, ರಸಿಕ್ ಸಲಾಮ್ ತಲಾ 2 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ, ಮುಕೇಶ್ ಕುಮಾರ್, ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.