ಕಳಪೆ ಬೌಲಿಂಗ್‌, ಫೀಲ್ಡಿಂಗ್‌ – ಬುಮ್ರಾ, ಕಿಶನ್‌, ಸೂರ್ಯ ಆಟಕ್ಕೆ ಆರ್‌ಸಿಬಿ ಬರ್ನ್‌

Public TV
2 Min Read
surya kumar mi

ಮುಂಬೈ: ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ (RCB) ಬೆಲೆ ತೆತ್ತಿದೆ. ಆರಂಭಿಕ ಆಟಗಾರ ಇಶನ್‌ ಕಿಶನ್‌, ನಂತರ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಮುಂಬೈ ಇಂಡಿಯನ್ಸ್‌ (Mumbai Indians) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಗೆಲ್ಲಲು 197 ರನ್‌ಗಳ ಗುರಿಯನ್ನು ಪಡೆದ ಮುಂಬೈ 15.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ಈ ಮೂಲಕ ಮೂರು ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಎರಡನೇ ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆರ್‌ಸಿಬಿ ಸೋತಿದ್ದು ಡೆಲ್ಲಿ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.

ಈಶನ್‌ ಕಿಶನ್‌ (Ishan Kishan) ಮತ್ತು ರೋಹಿತ್‌ ಶರ್ಮಾ (Rohit Sharma) ಸ್ಫೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟಿಗೆ 101 ರನ್‌ ಜೊತೆಯಾಟವಾಡಿದರು. ಇಶನ್‌ ಕಿಶನ್‌ 69 ರನ್‌(34 ಎಸೆತ, 7 ಬೌಂಡರಿ, 5 ಸಿಕ್ಸ್‌), ರೋಹಿತ್‌ ಶರ್ಮಾ 38 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರು.

 

ಗಾಯಗೊಂಡು ತಂಡದಿಂದ ಹೊರಗೆ ಇದ್ದ ಸೂರ್ಯಕುಮಾರ್‌ ಯಾದವ್‌ (Surya Kumar Yadav) ತಮ್ಮ ಎಂದಿನ ಲಯದಲ್ಲಿ ಬ್ಯಾಟ್‌ ಬೀಸಿದರು. ಪರಿಣಾಮ ಕೇವಲ 19 ಎಸೆತದಲ್ಲಿ 52 ರನ್‌ (5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಔಟಾಗದೇ 21 ರನ್‌(6 ಎಸೆತ, 3 ಬೌಂಡರಿ) ತಿಲಕ್‌ ವರ್ಮಾ ಔಟಾಗದೇ 16 ರನ್‌ ಹೊಡೆದರು.

ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ (Dinesh Karthik) ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಆಟದಿಂದ 8 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಬೆನ್ನೆಲುಬನ್ನು ಮುರಿದರು. 4 ಎಸೆತ ಎದುರಿಸಿದ ಮ್ಯಾಕ್ಸ್‌ ವೆಲ್‌ ಶೂನ್ಯ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

Share This Article