ಕೊನೆಯ ಪಂದ್ಯ ಗೆದ್ದರೂ ಲಕ್ನೋಗಿಲ್ಲ ಪ್ಲೇಆಫ್‌ ಅವಕಾಶ

Public TV
3 Min Read
Lucknow Super Giants LSG

ಮುಂಬೈ: ವಾಂಖೇಡೆ ಮೈದಾನದಲ್ಲಿ ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 18 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆದ್ದರೂ ನೆಟ್‌ ರನ್‌ ರೆಟ್‌ (Net Run Rate) ಕಡಿಮೆ ಇರುವ ಕಾರಣ ಲಕ್ನೋಗೆ ಪ್ಲೇಆಫ್‌ ಪ್ರವೇಶಿಸುವ ಅವಕಾಶ ತಪ್ಪಿದೆ.

ಮೊದಲು ಬ್ಯಾಟ್‌ ಮಾಡಿದ ಲಕ್ನೋ 6 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

 

 

ಮುಂಬೈ ಪರ ರೋಹಿತ್‌ ಶರ್ಮಾ 68 ರನ್‌ (38 ಎಸೆತ, 10 ಬೌಂಡರಿ, 3 ಸಿಕ್ಸರ್‌) ಕೊನೆಯಲ್ಲಿ ನಮನ್‌ ಧಿರ್‌ ಔಟಾಗದೇ 62 ರನ್‌(28 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 6 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತ್ತು. ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನಿಕೋಲಸ್‌ ಪೂರನ್‌ ಹಾಗೂ ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ ಬಲ ತುಂಬಿದರು.

 

 

 

ನಿಕೋಲಸ್‌ ಪೂರನ್‌ ಕೇವಲ 29 ಎಸೆತಗಳಲ್ಲಿ 75 ರನ್‌ (8 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಇದರೊಂದಿಗೆ ಸುಧಾರಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಕೆ.ಎಲ್‌ ರಾಹುಲ್‌ 41 ಎಸೆತಗಳಲ್ಲಿ 55 ರನ್‌ (3 ಸಿಕ್ಸರ್‌, 3 ಬೌಂಡರಿ) ಬಾರಿಸಿದರು. 4ನೇ ವಿಕೆಟ್‌ಗೆ ಸ್ಫೋಟಕ ಪ್ರದರ್ಶನ ನೀಡಿದ ಈ ಜೋಡಿ 44 ಎಸೆತಗಳಲ್ಲಿ ಬರೋಬ್ಬರಿ 109 ರನ್‌ಗಳ ಜೊತೆಯಾಟ ನೀಡಿತ್ತು.

ಇದರೊಂದಿಗೆ ಮಾರ್ಕಸ್‌ ಸ್ಟೋಯ್ನಿಸ್‌ 28 ರನ್‌, ದೀಪಕ್‌ ಹೂಡ 11 ರನ್‌, ಆಯುಷ್‌ ಬದೋನಿ 22 ರನ್‌ ಹಾಗೂ ಕೃನಾಲ್‌ ಪಾಂಡ್ಯ 12 ರನ್‌ಗಳ ಕೊಡುಗೆ ನೀಡಿದ ಪರಿಣಾಮ ಲಕ್ನೋ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

 

 

 

ಲಕ್ನೀ ಸೂಪರ್‌ ಜೈಂಟ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ನುವಾನ್ ತುಷಾರ ಹಾಗೂ ಪಿಯೂಷ್‌ ಚಾವ್ಲಾ ತಲಾ 3 ವಿಕೆಟ್‌ ಕಿತ್ತರು. ಚೆನ್ನೈ ತಂಡ 14 ಅಂಕ ಗಳಿಸಿದ್ದರೆ ಆರ್‌ಸಿಬಿ 12 ಅಂಕ ಗಳಿಸಿದೆ. ಹೀಗಿದ್ದರೂ ಈ ಎರಡು ತಂಡಗಳ ರನ್‌ ರೇಟ್‌ ಲಕ್ನೋ ಮತ್ತು ಡೆಲ್ಲಿ ತಂಡಕ್ಕಿಂತ ಉತ್ತಮವಾಗಿದೆ.

ಪ್ಲೇ ಆಫ್‌ ಅವಕಾಶ ಯಾಕಿಲ್ಲ?
ಈಗಾಗಲೇ ಕೋಲ್ಕತ್ತಾ 19 ಅಂಕ, ರಾಜಸ್ಥಾನ 16, ಹೈದರಾಬಾದ್‌ 15 ಅಂಕ ಗಳಿಸಿ ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದೆ. ಶನಿವಾರ ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ (Chennai) ಗೆದ್ದರೆ ಸುಲಭವಾಗಿ ಪ್ಲೇ ಆಫ್‌ ಪ್ರವೇಶಿಸಲಿದೆ. ಆರ್‌ಸಿಬಿಗೂ (RCB) ಪ್ಲೇ ಆಫ್‌ಗೆ ಹೋಗುವ ಅವಕಾಶವಿದೆ. ಆರ್‌ಸಿಬಿ 18 ರನ್‌ನಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಂತೆ ಗೆದ್ದರೆ ಮಾತ್ರ ಪ್ಲೇ ಆಫ್‌ ಪ್ರವೇಶಿಸಲಿದೆ.

 

Share This Article