ಬೆಂಗಳೂರು: ಕಳಪೆ ಬೌಲಿಂಗ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿನಲ್ಲೇ ಹೀನಾಯ ಸೋಲನುಭವಿಸಿದೆ. ಮಯಾಂಕ್ ಯಾದವ್ ಮಾರಕ ಬೌಲಿಂಗ್ ಹಾಗೂ ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಕ್ನೋ ತಂಡ 28 ರನ್‌ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಲಕ್ನೋ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಕ್ರೀಸ್‌ಗಿಳಿದ ಲಕ್ನೋ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. 182 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿದ್ದು, ಸೋಲೊಪ್ಪಿಕೊಂಡಿತು.
Advertisement
Advertisement
182 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲಿ ಸ್ಪೋಟಕ ಪ್ರದರ್ಶನ ನೀಡಿದರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 4.2 ಓವರ್‌ಗಳಲ್ಲಿ 40 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಮುಂದಿನ 18 ರನ್ ಗಳಿಸುಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.
Advertisement
ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್ ಹಾಗೂ ರಜತ್ ಪಾಟೀದಾರ್ ಅವರ ಆಟವು ಗೆಲುವಿನ ಭರವಸೆ ಹೆಚ್ಚಿಸಿತ್ತು. ಇವರಿಬ್ಬರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆರ್‌ಸಿಬಿ ಗೆಲುವಿನ ಕನಸು ಕುಸಿಯಿತು.
Advertisement
ಆರ್‌ಸಿಬಿ ಪರ ಮಹಿಪಾಲ್ ಲೋಮ್ರೋರ್ 13 ಎಸೆತಗಳಲ್ಲಿ ಸ್ಫೋಟಕ 33 ರನ್ (3 ಸಿಕ್ಸರ್, 3 ಬೌಂಡರಿ) ಚಚ್ಚಿದರೆ, ಆರ್‌ಸಿಬಿ ಪರ ವಿರಾಟ್ ಕೊಹ್ಲಿ 22 ರನ್, ಫಾಫ್ ಡು ಪ್ಲೆಸಿಸ್ 19 ರನ್, ರಜತ್ ಪಾಟಿದಾರ್ 29 ರನ್, ಕ್ಯಾಮರೂನ್ ಗ್ರೀನ್ 9 ರನ್, ಅನೂಜ್ ರಾವತ್ 11 ರನ್, ಸಿರಾಜ್ 12 ರನ್, ಟಾಪ್ಲಿ 3 ರನ್ ಗಳಿಸಿದರು. ಭರವಸೆ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು.
ಲಕ್ನೋ ಪರ ಮಯಾಂಕ್ ಯಾದವ್ 3 ವಿಕೆಟ್ ಕಿತ್ತರೆ, ನವೀನ್ ಉಲ್ ಹಕ್ 2 ವಿಕೆಟ್ ಹಾಗೂ ಮಣಿಮಾರನ್ ಸಿದ್ಧಾರ್ಥ್, ಯಶ್ ಠಾಕೂರ್, ಮಾರ್ಕಸ್ಟ್ ಸ್ಟೋಯ್ನಿಸ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡಿತು. 53 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಲಕ್ನೋ ತಂಡ 8.5 ಓವರ್‌ಗಳಲ್ಲಿ 73 ರನ್‌ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಆದ್ರೆ ಆರಂಭಿಕ ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಅವರ ಸ್ಫೋಟಕ ಪ್ರದರ್ಶನದಿಂದ ತಂಡ 180 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಲಕ್ನೋ ತಂಡದ ಪರವಾಗಿ ಕ್ವಿಂಟನ್ ಡಿ ಕಾಕ್ 56 ಎಸೆತಗಳಲ್ಲಿ 81 ರನ್ (5 ಸಿಕ್ಸರ್, 8 ಬೌಂಡರಿ) ಚಚ್ಚಿದರೆ, ನಿಕೋಲಸ್ ಪೂರನ್ 40 ರನ್ (21 ಎಸೆತ, 5 ಸಿಕ್ಸರ್, 1 ಬೌಂಡರಿ), ಮಾರ್ಕಸ್ ಸ್ಟೋಯ್ನಿಸ್ 24 ರನ್ (15, ಎಸೆತ, 2 ಸಿಕ್ಸರ್, 1 ಬೌಂಡರಿ) ಗಳಿಸಿದ್ರೆ, ಕೆ.ಎಲ್ ರಾಹುಲ್, 20 ರನ್, ದೇವದತ್ ಪಡಿಕಲ್ 6 ರನ್ ಗಳಿಸಿದರು.
ಆರ್‌ಸಿಬಿ ಪರ ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್ ಕಿತ್ತರೆ ರೀಸ್ ಟೋಪ್ಲಿ, ಯಶ್ ದಯಾಳ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.