ಹೈದರಾಬಾದ್‌ ಪಾಲಿಗೆ ಕಿಲ್ಲರ್‌ ಆದ ಮಿಲ್ಲರ್‌ – ಗುಜರಾತ್‌ ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

Public TV
2 Min Read
GT vs SRH 2

– ಮಿಂಚಿದ ಮಿಲ್ಲರ್‌, ಮೋಹಿತ್‌ ಶರ್ಮಾ – ಗಿಲ್‌ ನಾಯಕತ್ವದಲ್ಲಿ 2ನೇ ಜಯ

ಅಹಮದಾಬಾದ್‌: ಡೇವಿಡ್‌ ಮಿಲ್ಲರ್‌, ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ (Shubman Gill) ಸಂಘಟಿತ ಬ್ಯಾಟಿಂಗ್‌ ಹಾಗೂ ಮೋಹಿತ್‌ ಶರ್ಮಾ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

GT vs SRH 1

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸಿತ್ತು. 163 ರನ್‌ಗಳ ಗುರಿ ಬೆನ್ನತ್ತಿದ ಟೈಟಾನ್ಸ್‌ (Gujarat Titans) ಪಡೆ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿ ಗೆಲುವು ಸಾಧಿಸಿತು. ಸ್ಫೋಟಕ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ ಕೊನೇ ಓವರ್‌ ಮೊದಲ ಎಸೆತದಲ್ಲೇ ಅದ್ಧೂರಿ ಸಿಕ್ಸರ್‌ ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿದರು.

SRH

ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಮುಂವೈ ವಿರುದ್ಧ ದಾಖಲೆಯ 277 ರನ್​ ಬಾರಿಸಿದ್ದ ಎಸ್​ಆರ್​ಎಚ್ ಈ ಪಂದ್ಯದಲ್ಲಿ ಆರಂಭದಿಂದಲೇ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಯಾಂಕ್ ಅಗರ್ವಾಲ್​ 16 ರನ್​ಗೆ ಔಟಾದರೆ, ಟ್ರಾವಿಸ್​ ಹೆಡ್​ 19 ರನ್​ಗೆ ಬೌಲ್ಡ್ ಆದರು. ಅಭಿಷೇಕ್ ಶರ್ಮಾ 29 ರನ್, ಏಡೆನ್​ ಮಾರ್ಕ್ರಮ್​ 17 ರನ್​ಗೆ ಸೀಮಿತಗೊಂಡರು. ಹೆನ್ರಿಚ್ ಕ್ಲಾಸೆನ್​ 24 ಹಾಗೂ ಶಾಬಾಜ್‌ ಅಹಮದ್​ 22 ರನ್ ಬಾರಿಸಿದರು. ಕೊನೆಯಲ್ಲಿ ಅಬ್ದುಲ್​ ಸಮದ್ 29 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ತಂಡಕ್ಕೆ ನೆರವಾದರು.

GT vs SRH 3

ಗುಜರಾತ್‌ಗೆ ಸುಲಭ ತುತ್ತಾದ ಹೈದರಾಬಾದ್‌:
ಸ್ಪರ್ಧಾತ್ಮಕ ಗುರಿ ಎದುರಿಸಲು ಕಣಕ್ಕಿಳಿದ ಗುಜರಾತ್​ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 36 ರನ್ ಬಾರಿಸಿತು. ವೃದ್ಧಿಮಾನ್​ ಸಾಹ 25 ರನ್ ಬಾರಿಸಿದರೆ ನಾಯಕ ಶುಭ್​ಮನ್​ ಗಿಲ್​ 36 ರನ್​ ಕೊಡುಗೆ ನೀಡಿದರು. 3ನೇ ಕ್ರಮಾಂಕದಲ್ಲಿ ಆಡಿದ ಸಾಯಿ ಸುದರ್ಶನ್​ 45 ರನ್ ಬಾರಿಸಿದರೆ ಡೇವಿಡ್ ಮಿಲ್ಲರ್​ ಅಜೇಯ 44 ರನ್​ ಬಾರಿಸುವ ಮೂಲಕ ಸುಲಭ ಗೆಲುವು ತಂದುಕೊಟ್ಟರು. ವಿಜಯ್ ಶಂಕರ್​ 14 ರನ್​ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

Share This Article