ಚೆನ್ನೈ: ಕೋಲ್ಕತ್ತಾ ನೈಟ್‌ರೈಡರ್ಸ್ (Kolkata Knight Riders) ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿಗೆ 114 ರನ್‌ಗಳ ಗುರಿ ನೀಡಿದೆ.
ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು ಫೀಲ್ಡಿಂಗ್ ಮಾಡುವ ಅವಕಾಶವನ್ನು ಕೆಕೆಆರ್‌ಗೆ ಬಿಟ್ಟುಕೊಟ್ಟಿತ್ತು.
ಕ್ವಾಲಿಫೈಯರ್ 1ನಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಹೈದರಾಬಾದ್ ತಂಡವಿಂದು ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಮೊದಲ ಓವರ್‌ನಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) 2 ರನ್‌ಗಳಿಗೆ ಔಟಾದರೆ ಟ್ರಾವಿಸ್ ಹೆಡ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್, ನಿತೀಶ್ ಕುಮಾರ್ ಸೇರಿದಂತೆ ಇತರ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಅಭಿಷೇಕ್ ಕೇವಲ 2 ರನ್ ಗಳಿಸಿದ್ರೆ, ತ್ರಿಪಾಠಿ 9 ರನ್, ಮಾರ್ಕ್ರಮ್ 20 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸೆನ್ 16 ರನ್, ಶಹಬಾಜ್ ಅಹ್ಮದ್ 8 ರನ್, ಅಬ್ದುಲ್ ಸಮದ್, ಜಯದೇವ್ ಉನದ್ಕಟ್ ತಲಾ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ ಪ್ಯಾಟ್ ಕಮ್ಮಿನ್ಸ್ (Pat Cummins) 19 ಎಸೆತಗಳಲ್ಲಿ 24 ರನ್‌ಗಳಿಸಿ ಔಟಾದರು. ಅಂತಿಮವಾಗಿ ಹೈದರಾಬಾದ್ ತಂಡ 113 ರನ್‌ಗಳಿಗೆ ಆಲೌಟ್ ಆಯಿತು.
ಕೆಕೆಆರ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆಂಡ್ರೆ ರಸ್ಸೆಲ್ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ತಲಾ 2 ವಿಕೆಟ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಸುನೀಲ್ ನರೇನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.