ನವದೆಹಲಿ: ಕೊನೆಯವರೆಗೂ ಜಿದ್ದಾ-ಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ವಾಂಖೆಡೆ ಮೈದಾನದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿತ್ತು. 258 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ 10 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಗಿದೆ.
Advertisement
Advertisement
ಕೊನೇ ಓವರ್‌ನಲ್ಲಿ ಕೈತಪ್ಪಿದ ಗೆಲುವು:
ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 25 ರನ್‌ಗಳ ಅಗತ್ಯವಿತ್ತು. ಮುಕೇಶ್ ಕುಮಾರ್ ಬೌಲಿಂಗ್ ವೇಳೆ ತಿಲಕ್ ವರ್ಮಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್ ಕದಿಯಲು ಯತ್ನಿಸಿ ತಿಲಕ್ ರನೌಟ್‌ಗೆ ತುತ್ತಾದರು. ಇದರೊಂದಿಗೆ ಮುಂಬೈ ತಂಡದ ಗೆಲುವಿನ ಕನಸೂ ಭಗ್ನವಾಯಿತು. ಕೊನೆಯವರೆಗೂ ಹೋರಾಡಿದ ಮುಂಬೈ 247 ರನ್ ಗಳಿಸಿತು.
Advertisement
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಜಿ ನಾಯಕ ರೋಹಿತ್ ಶರ್ಮಾ 8 ರನ್‌ಗಳಿಗೆ ವಿಕೆಟ್ ಕೈಚೆಲ್ಲಿದರು, ಈ ಬೆನ್ನಲ್ಲೇ 20 ರನ್ ಗಳಿಸಿ ಇಶಾನ್ ಕಿಶನ್ ಸಹ ಪೆವಿಲಿಯನ್‌ಗೆ ಮರಳಿದರು. ನಂತರ ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ್ದ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 26 ರನ್ ಬಾರಿಸಿ ಔಟಾದರು. ಇದು ಮುಂಬೈ ತಂಡಕ್ಕೆ ಸೋಲಿನ ಭೀತಿ ಉಂಟುಮಾಡಿತ್ತು.
Advertisement
ಮುಂಬೈ ಪರ ತಿಲಕ್ ವರ್ಮಾ 63 ರನ್ (32 ಎಸೆತ, 4 ಸಿಕ್ಸರ್, 4 ಬೌಂಡರಿ), ಹಾರ್ದಿಕ್ ಪಾಂಡ್ಯ 46 ರನ್ (24 ಎಸೆತ, 3 ಸಿಕ್ಸರ್, 4 ಬೌಂಡರಿ), ಟಿಮ್ ಡೇವಿಡ್ 37 ರನ್ (17 ಎಸೆತ, 3 ಸಿಕ್ಸರ್, 4 ಬೌಂಡರಿ), ಸೂರ್ಯಕುಮಾರ್ 26 ರನ್, ಇಶಾನ್ ಕಿಶನ್ 20 ರನ್, ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಮುಂಬೈ ವಿರೋಚಿತ ಸೋಲಿಗೆ ತುತ್ತಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್, ರಸಿಖ್ ಸಲಾಮ್ ತಲಾ 3 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್ 2 ವಿಕೆಟ್ ಪಡೆದು ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾದ ಫ್ರೇಸರ್ ಮೆಕ್‌ಗಾರ್ಕ್ ಹಾಗೂ ಅಭಿಷೇಕ್ ಪೋರೆಲ್ ಆರಂಭದಿಂದಲೇ ಸ್ಪೋಟಕ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರು. ಮೊದಲ 2.4 ಓವರ್‌ಗಳಲ್ಲೇ ಡೆಲ್ಲಿ ತಂಡ 50 ರನ್ ಬಾರಿಸಿತ್ತು. ಆಸ್ಟ್ರೇಲಿಯಾ ಮೂಲದ ಯುವ ಸ್ಪೋಟಕ ಬ್ಯಾಟರ್ ಫ್ರೇಸರ್ ಮೆಗಾರ್ಕ್ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದ್ದು. ಒಂದಾದಮೇಲೊಂದು ಎಸೆತಗಳು ಸಿಕ್ಸರ್, ಬೌಂಡರಿಯ ಹಾದಿಯನ್ನೇ ಹಿಡಿಯುತ್ತಿದ್ದವು. ಇದರೊಂದಿಗೆ ಮೆಕ್‌ಗಾರ್ಕ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಡೆಲ್ಲಿ ಪವರ್ ಪ್ಲೇ ನಲ್ಲಿ 92 ರನ್ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ ಸಿಡಿಸಿದ ಗರಿಷ್ಠ ಸ್ಕೋರರ್ ಆಗಿತ್ತು.
ಮೆಕ್‌ಗಾರ್ಕ್ ಹಾಗೂ ಅಭಿಷೇಕ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ ಬರೋಬ್ಬರಿ 114 ರನ್ ಸಿಡಿಸಿತ್ತು. ಮೆಕ್‌ಗಾರ್ಕ್ ಬಳಿಕ ಶಾಯ್ ಹೋಪ್, ರಿಷಭ್ ಪಂತ್, ಟ್ರಿಸ್ಟನ್ ಸ್ಟಬ್ಸ್ ಸಹ ಮುಂಬೈ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 257 ರನ್ ಸಿಡಿಸಿತ್ತು.
ಡೆಲ್ಲಿ ಪರ ಮೆಕ್‌ಗಾರ್ಕ್ 84 ರನ್ (27 ಎಸೆತ, 11 ಬೌಂಡರಿ, 6 ಸಿಕ್ಸರ್), ಟ್ರಿಸ್ಟನ್ ಸ್ಟಬ್ಸ್ 48 ರನ್ (25 ಎಸೆತ, 6 ಬೌಂಡರಿ, 2 ಸಿಕ್ಸರ್), ಶಾಯ್‌ಹೋಪ್ 41 ರನ್ (17 ಎಸೆತ, 5 ಸಿಕ್ಸರ್), ರಿಷಭ್ ಪಂತ್ 29 ರನ್, ಅಕ್ಷರ್ ಪಟೇಲ್ 11 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಲ್ಯೂಕ್ ವುಡ್, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ರನ್ ಏರಿದ್ದು ಹೇಗೆ?
17 ಎಸೆತ – 50 ರನ್
41 ಎಸೆತ – 100 ರನ್
73 ಎಸೆತ – 150 ರನ್
98 ಎಸೆತ – 200 ರನ್
120 ಎಸೆತ – 257 ರನ್