ಚೆನ್ನೈ: ಕೊನೆಯಲ್ಲಿ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ (MS Dhoni), ರವೀಂದ್ರ ಜಡೇಜಾ (Ravindra Jadeja) ಸಿಕ್ಸರ್ ಬೌಂಡರಿಗಳ ಬ್ಯಾಟಿಂಗ್ ಹೋರಾಟದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ (Rajasthan Royals) 3 ರನ್‌ಗಳ ರೋಚಕ ಜಯ ಸಾಧಿಸಿತು.
ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ (Chennai Super Kings) 21 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ಗೆ ಬಂದ ಸಂದೀಪ್ ಶರ್ಮಾ ಸತತ 2 ವೈಡ್ ನೀಡಿ ಆತಂಕ ಹೆಚ್ಚಿಸಿದ್ದರು. ನಂತರ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಧೋನಿ ಮೊದಲ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. ಆದರೆ 2-3ನೇ ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ, 4ನೇ ಎಸೆತದಲ್ಲಿ 1 ರನ್ ಕದ್ದರು. ಇನ್ನೂ 2 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು, ಈ ವೇಳೆ ಕ್ರೀಸ್‌ಗೆ ಬಂದ ಜಡೇಜಾ 5ನೇ ಎಸೆತದಲ್ಲಿ 1 ರನ್ ತೆಗೆದುಕೊಂಡರು. ಕೊನೆಯ ಎಸೆತದಲ್ಲಿ ಮಹಿ ಸಿಕ್ಸರ್ ಬಾರಿಸಲು ಪ್ರಯತ್ನಿಸಿ ಕೇವಲ 1 ರನ್ ಕದ್ದರು. ಪರಿಣಾಮ ಸಿಎಸ್‌ಕೆ 3 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. 176 ರನ್‌ಗಳ ಗುರಿ ಬೆನ್ನತ್ತಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ವಿರೋಚಿತ ಸೋಲನುಭವಿಸಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಮೂರು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಋತುರಾಜ್ ಗಾಯಕ್ವಾಡ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ 2ನೇ ವಿಕೆಟ್‌ಗೆ ಜೊತೆಯಾದ ಅಜಿಂಕ್ಯ ರಹಾನೆ, ಡಿವೋನ್ ಕಾನ್ವೆ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. 19 ಎಸೆತಗಳಲ್ಲಿ 31 ರನ್ (2 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ರಹಾನೆ ಅಶ್ವಿನ್ ಬೌಲಿಂಗ್‌ನಲ್ಲಿ ಔಟಾಗಿ ಹೊರನಡೆದರು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದ ಡಿವೋನ್ವೆ 50 ರನ್ (38 ಎಸೆತ, 6 ಬೌಂಡರಿ) ಕ್ಯಾಚ್ ನೀಡಿ ಔಟಾದರು.
ನಂತರ ಕಣಕ್ಕಿಳಿದ ನಾಯಕ ಎಂ.ಎಸ್ ಧೋನಿ, ರವೀಂದ್ರ ಜಡೇಜಾ ಸಿಕ್ಸರ್, ಬೌಂಡರಿ ಅಬ್ಬರಿಸಲು ಶುರು ಮಾಡಿದರು. 30 ಎಸೆತಗಳಲ್ಲಿ ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 59 ರನ್ ಬಾರಿಸಿತ್ತು. ಧೋನಿ 17 ಎಸೆತಗಳಲ್ಲಿ 32 ರನ್ (3 ಸಿಕ್ಸರ್, 1 ಬೌಂಡರಿ) ಬಾರಿಸಿದರೆ, ಜಡೇಜಾ 15 ಎಸೆತಗಳಲ್ಲಿ 25 ರನ್ (2 ಸಿಕ್ಸರ್, 1 ಬೌಂಡರಿ) ಗಳಿಸಿದರು. ಶಿವಂ ದುಬೆ 8 ರನ್, ಮೊಯಿನ್ ಅಲಿ 7 ರನ್, ಅಂಬಟಿ ರಾಯುಡು 1 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ರವಿಚಂದ್ರನ್ ಅಶ್ಚಿನ್ (Ravichandran Ashwin) 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಕಿತ್ತರೆ, ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದುಕೊಂಡರು ಇನ್ನೂ ಆಡಂ ಜಂಪಾ, ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ (CKS) ಆರಂಭದಲ್ಲೇ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ಮಾಡಿದರು. ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ 8 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.
ಈ ಜೋಡಿ 2ನೇ ವಿಕೆಟ್‌ಗೆ 41 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟ ಆಡಿತು. ದೇವದತ್ ಪಡಿಕ್ಕಲ್ (Devdutt Padikkal) 26 ಎಸೆತಗಳಲ್ಲಿ 5 ಬೌಂಡರಿ ಸಹಿತ 38 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್ ಎರಡೇ ಎಸೆತಗಳಲ್ಲಿ ರನ್ ಗಳಿಸದೇ ಔಟಾದರು. ಇನ್ನೂ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ ಜವಾಬ್ದಾರಿಯುತ ಆಟವಾಡಿದರು. 22 ಎಸೆತಗಳಲ್ಲಿ 30 ರನ್ (1 ಬೌಂಡರಿ, 2 ಸಿಕ್ಸರ್) ಗಳಿಸಿದರು. ಎಂದಿನಂತೆ ಉತ್ತಮ ಫಾರ್ಮ್‌ನಲ್ಲಿ ಬ್ಯಾಟಿಂಗ್ ಮುಂದುವರಿಸಿದ ಜೋಸ್ ಬಟ್ಲರ್ (Jos Buttler) ಬೊಂಬಾಟ್ ಬ್ಯಾಟಿಂಗ್ ಮಾಡಿದರು.
36 ಎಸೆತಗಳಲ್ಲಿ 52 ರನ್ (1 ಬೌಂಡರಿ, 3 ಸಿಕ್ಸರ್) ಗಳಿಸಿ ಮೊಯೀನ್ ಅಲಿ ಸ್ಪಿನ್ ದಾಳಿಗೆ ಕ್ಲೀನ್ ಬೌಲ್ಡ್ ಆದರು. ಧ್ರುವ್ ಜುರೆಲ್ 6 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರೇ, ಜೇಸನ್ ಹೋಲ್ಡರ್ ರನ್ ಖಾತೆ ತೆರೆಯದೇ ಔಟ್ ಆದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸಿಕ್ಸರ್, ಬೌಂಡರಿಗಳ ಸ್ಫೋಟಕ ಬ್ಯಾಟಿಂಗ್ ನಡೆಸಿ, 18 ಎಸೆತಗಳಲ್ಲಿ 30 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.
ಜಡೇಜಾ ಜಾದು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಪಿನ್ ಜಾದು ಮಾಡಿದ ರವೀಂದ್ರ ಜಡೇಜಾ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ದೇವದತ್ ಪಡಿಕ್ಕಲ್‌ರನ್ನ ಔಟ್ ಮಾಡಿದರು. ಅದೇ ಓವರ್ ನಲ್ಲಿ ನಾಯಕ ಸಂಜು ಸ್ಯಾಮ್ಸನ್‌ರನ್ನ ಕ್ಲೀನ್ ಬೌಲ್ಡ್ ಮಾಡಿದರು. 4 ಓವರ್ ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಆಕಾಶ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಕೂಡ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಮೊಯಿನ್ ಅಲಿ 1 ವಿಕೆಟ್ ಕಿತ್ತರು.