ಜೈಪುರ: ಐಪಿಎಲ್ (IPL) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ರಾಜಸ್ಥಾನ ರಾಯಲ್ಸ್ (Rajasthan Royals) 32 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 202 ರನ್ ಹೊಡೆದಿತ್ತು. ಗೆಲ್ಲಲು 203 ರನ್‌ಗಳ ಕಠಿಣ ಸವಾಲು ಪಡೆದ ಚೆನ್ನೈ 20 ಓವರ್‌ಗಳಲ್ಲಿ6 ವಿಕೆಟ್ ನಷ್ಟಕ್ಕೆ 170 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಈ ಪಂದ್ಯವನ್ನು ಗೆಲ್ಲುವ ಮೂಲಕ ರಾಜಸ್ಥಾನ ಅಂಕಪಟ್ಟಿಯಲ್ಲಿ 10 ಅಂಕ (0.939 ನೆಟ್ ರನ್ ರೇಟ್) ಪಡೆದು ಮೊದಲ ಸ್ಥಾನಕ್ಕೆ ಜಿಗಿದಿದೆ. 10 ಅಂಕ ಪಡೆದಿರುವ ಚೆನ್ನೈ 0.376 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ. ಗುಜರಾತ್ ತಂಡವೂ 10 ಅಂಕ 0.580 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ
ಚೆನ್ನೈ ತಂಡದ ಆರಂಭ ಉತ್ತಮವಾಗಿತ್ತು, ಮೊದಲ ವಿಕೆಟಿಗೆ 42 ರನ್ ಬಂದಿತ್ತು. 1 ವಿಕೆಟ್ ನಷ್ಟಕ್ಕೆ 69 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ನಂತರ 4 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಚೆನ್ನೈ ಪರ ಋತುರಾಜ್ ಗಾಯಕ್‌ವಾಡ್ 47 ರನ್(29 ಎಸೆತ, 5 ಬೌಂಡರಿ, 1 ಸಿಕ್ಸರ್), ಶಿವಂ ದುಬೆ 52 ರನ್(33 ಎಸೆತ, 2 ಬೌಂಡರಿ, 4 ಸಿಕ್ಸರ್), ಮೊಯಿನ್ ಅಲಿ ಮತ್ತು ರವೀಂದ್ರ ಜಡೇಜಾ ತಲಾ 23 ರನ್ ಹೊಡೆದರು. ಇದನ್ನೂ ಓದಿ: IPL 2023: ವಾಷಿಂಗ್ಟನ್ ಸುಂದರ್ ಔಟ್ – SRHಗೆ ಗಾಯದ ಮೇಲೆ ಬರೆ
ತಮ್ಮ ಉತ್ತಮ ಬೌಲಿಂಗ್‌ನಿಂದ ಚೆನ್ನೈ ಬ್ಯಾಟರ್‌ಗಳನ್ನು ರಾಜಸ್ಥಾನ ಬೌಲರ್‌ಗಳು ಕಟ್ಟಿ ಹಾಕಿದರು. ಆಡಂ ಜಂಪಾ 3 ವಿಕೆಟ್, ಅಶ್ವಿನ್ 2 ವಿಕೆಟ್ ಪಡೆದರೆ ಕುಲದೀಪ್ ಯಾದವ್ 1 ವಿಕೆಟ್ ಕಿತ್ತರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನದ ಪರವಾಗಿ ಯಶಸ್ವಿ ಜೈಸ್ವಾಲ್ 77 ರನ್(43 ಎಸೆತ, 8 ಬೌಂಡರಿ, 4 ಸಿಕ್ಸರ್) ಜೋಸ್ ಬಟ್ಲರ್ 27 ರನ್(21 ಎಸೆತ, 4 ಬೌಂಡರಿ), ಧ್ರುವ್ ಜುರೆಲ್ ಔಟಾಗದೇ 34 ರನ್(15 ಎಸೆತ, 3 ಬೌಂಡರಿ, 2 ಸಿಕ್ಸರ್), ದೇವದತ್ತ ಪಡಿಕ್ಕಲ್ ಔಟಾಗದೇ 27 ರನ್(13 ಎಸೆತ, 5 ಬೌಂಡರಿ) ಹೊಡೆದ ಪರಿಣಾಮ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ರಾಜಸ್ಥಾನದ ಕೊನೆಯ 50 ರನ್ 21 ಎಸೆತಗಳಲ್ಲಿ ದಾಖಲಾಗಿತ್ತು.