ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ವಿರುದ್ಧ ಸೋಮವಾರ ನಡೆದ ರಣರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 1 ವಿಕೆಟ್ ರೋಚಕ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (Faf Du Plessis) ಲಕ್ನೋ ಸೂಪರ್‌ಜೈಂಟ್ಸ್ ತಂಡ ಬೌಲರ್‌ಗಳನ್ನು ಅಟ್ಟಾಡಿಸಿ ಬಾರಿಸಿದ್ದರು. ಅದರಲ್ಲೂ ಫಾಫ್ ಡುಪ್ಲೆಸಿಸ್ ಬಾರಿಸಿದ ಚೆಂಡು ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು.
ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು. ಒಂದೆಡೆ ವಿರಾಟ್ ಕೊಹ್ಲಿ (Virat Kohli) ಅಬ್ಬರದ ಪ್ರದರ್ಶನ ನೀಡುತ್ತಿದ್ದರೇ ಅವರಿಗೆ ಕ್ರೀಸ್ ಬಿಟ್ಟುಕೊಡುತ್ತಾ ಬ್ಯಾಟಿಂಗ್ ನಡೆಸಿದ್ದರು. 11 ಓವರ್ ನಂತರ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆ ಡುಪ್ಲೆಸಿಸ್ ಬ್ಯಾಟಿಂಗ್ ಅಬ್ಬರ ಮುಂದುವರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಅಬ್ಬರದ ಪ್ರದರ್ಶನ ನೀಡಿದ ಫಾಫ್ ರನ್ ಹೊಳೆ ಹರಿಸಿದರು.
ಈ ಪಂದ್ಯದಲ್ಲಿ 15ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಸ್ಪಿನ್ ಬೌಲಿಂಗ್‌ಗೆ ಈ ಬಾರಿ ಐಪಿಎಲ್‌ನ ಅತಿದೊಡ್ಡ ಸಿಕ್ಸರ್ ಬಾರಿಸಿದರು. 15ನೇ ಓವರ್‌ನ 4ನೇ ಎಸೆತವನ್ನು ಭರ್ಜರಿಯಾಗಿ ಚಚ್ಚಿದ ಡುಪ್ಲೆಸಿಸ್ 115 ಮೀಟರ್ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ಸಿಡಿಸಿದ ಅತಿದೊಡ್ಡ ಸಿಕ್ಸರ್ ಎನಿಸಿಕೊಂಡಿತು. ಇದನ್ನೂ ಓದಿ: ಭರ್ಜರಿ 5 ಸಿಕ್ಸ್ – ಮಹಿ ದಾಖಲೆ ಉಡೀಸ್ ಮಾಡಿದ ರಿಂಕು ಕಿಂಗ್!
ಇವರೆಲ್ಲಾ ಟಾಪ್-10 ಸಿಕ್ಸರ್ ವೀರರು: ಚೆನ್ನೈಸೂಪರ್ ಕಿಂಗ್ಸ್ ತಂಡದಲ್ಲಿದ್ದ ಅಲ್ಬಿ ಮಾರ್ಕೆಲ್ ಉದ್ಘಾಟನಾ ಆವೃತ್ತಿಯಲ್ಲಿ 125 ಮೀಟರ್ ಸಿಕ್ಸರ್ ಬಾರಿಸಿದ್ದರು. ಅದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಆ ನಂತರದಲ್ಲಿ 2013ರಲ್ಲಿ ಕಿಂಗ್ಸ್ XI ಪಂಜಾಬ್ ತಂಡದಲ್ಲಿದ್ದ ಪ್ರವೀಣ್ ಕುಮಾರ್ 124 ಮೀಟರ್, ಆಡಂ ಗಿಲ್‌ಕ್ರಿಸ್ಟ್ 122 ಮೀಟರ್, ಯುವರಾಜ್ ಸಿಂಗ್ 119 ಮೀಟರ್, ಆರ್‌ಸಿಬಿ ತಂಡದಲ್ಲಿದ್ದ ರಾಬಿನ್ ಉತ್ತಪ್ಪ 120 ಮೀಟರ್, ಕ್ರಿಸ್ ಗೇಲ್ 119 ಮೀಟರ್, ರಾಸ್‌ಟೇಲರ್ 119 ಮೀಟರ್, ಹೈದರಾಬಾದ್ ತಂಡದ ಬೆನ್ ಕಟ್ಟಿಂಗ್ ಮತ್ತು ಕೆಕೆಆರ್‌ನಲ್ಲಿದ್ದ ಗೌತಮ್ ಗಂಭೀರ್ 117 ಮೀಟರ್ ಹಾಗೂ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ 115 ಮೀಟರ್ ಸಿಕ್ಸರ್ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಸಾಲಿಗೆ ಫಾಫ್ ಡುಪ್ಲೆಸಿಸ್ ಸೇರಿದ್ದಾರೆ. ಇದನ್ನೂ ಓದಿ: IPL 2023: ಲಕ್ನೋಗೆ ಸೂಪರ್ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು