ಚೆನ್ನೈ: ಆಕಾಶ್ ಮಧ್ವಾಲ್ ಮಾರಕ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್ ತಂಡವು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಎಲಿಮಿನೇಟರ್ 2ನೇ ಹಂತಕ್ಕೆ ತಲುಪಿದೆ. ಮೇ 26 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಇನ್ನೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ಸೋತು ನಿರಾಸೆ ಅನುಭವಿಸಿದೆ.
Advertisement
ಕಳೆದ ವರ್ಷವಷ್ಟೇ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 2ನೇ ಬಾರಿಯೂ ಮೊದಲ ಎಲಿಮಿನೇಟರ್ ಪಂದ್ಯದಲ್ಲೇ ಸೋತು ಹೊರನಡೆದಿದೆ. 2022ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು.
Advertisement
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ 16.3 ಓವರ್‌ಗಳಲ್ಲೇ 101 ರನ್‌ಗಳಿಗೆ ಸರ್ವಪತನಕಂಡಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಮುಂಬೈ ಬೌಲರ್‌ಗಳ ದಾಳಿಗೆ ತರಗೆಲೆಗಳಂತೆ ವಿಕೆಟ್ ಉದುರಿತು. ಪವರ್ ಪ್ಲೇ ನಲ್ಲಿ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಉತ್ತಮ ರನ್ ಕಲೆಹಾಕಿತ್ತು. ಬಳಿಕ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದ ಮುಂಬೈ ಎದುರು ಮಂಡಿಯೂರಬೇಕಾಯಿತು.
ಲಕ್ನೋ ತಂಡದ ಪರ ಮಾರ್ಕಸ್ ಸಗ್ಟೋಯ್ನಿಸ್ 40 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸರ್), ಕೈಲ್ ಮೇಯರ್ಸ್ 18 ರನ್, ದೀಪಕ್ ಹೂಡಾ 15 ರನ್ ಗಲಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ದೃಢವಾಗಿ ನಿಲ್ಲದ ಕಾರಣ ಲಕ್ನೋ ಹೀನಾಯ ಸೋಲನುಭವಿಸಿತು.
ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಮಧ್ವಾಲ್:
ಮುಂಬೈ ಇಂಡಿಯನ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆಕಾಶ್ ಮಧ್ವಾಲ್ 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಉಡೀಸ್ ಮಾಡಿದರು. ಈ ಮೂಲಕ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದರು. ಕೇಪ್‌ಟೌನ್‌ನಲ್ಲಿ ನಡೆದ 2009ರ ಐಪಿಎಲ್ ಆವೃತ್ತಿಯಲ್ಲಿ ಕುಂಬ್ಳೆ 3.1 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಇದೀಗ ಆಕಾಶ್ ಮಧ್ವಾಲ್ 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಚಿರ್ಸ್ ಜೋರ್ಡನ್ ಹಾಗೂ ಪಿಯೂಷ್ ಚಾವ್ಲಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರು ಹೆಚ್ಚಿನ ರನ್ ಕಲೆಹಾಕುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಜೋಡಿ 38 ಎಸೆತಗಳಲ್ಲಿ 66 ರನ್ ಬಾರಿಸಿತ್ತು. ಇವರಿಬ್ಬರ ಆಟದಿಂದ ಮುಂಬೈ ಮೊದಲ 10 ಓವರ್‌ಗಳಲ್ಲಿ 98 ರನ್ ಗಳಿಸಿತ್ತು. ಬಳಿಕ ಸೂರ್ಯ ಹಾಗೂ ಗ್ರೀನ್ ಔಟಾಗುತ್ತಿದ್ದಂತೆ ರನ್ ವೇಗ ಕಳೆದುಕೊಂಡ ಮುಂಬೈ ತಂಡ ಮುಂದಿನ 10 ಓವರ್‌ಗಳಲ್ಲಿ ಕೇವಲ 84 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಮುಂಬೈ ಪರ ಕ್ಯಾಮರೂನ್ ಗ್ರೀನ್ 41 ರನ್ (23 ಎಸತೆ, 6 ಬೌಂಡರಿ, 1 ಸಿಕ್ಸರ್), ಸೂರ್ಯಕುಮಾರ್ ಯಾದವ್ 33 ರನ್ (20 ಎಸೆತ, 2 ಬೌಂಡರಿ, 2 ಸಿಕ್ಸ್‌ರ್), ತಿಲಕ್ ವರ್ಮಾ 26 ರನ್, ನೇಹಾಲ್ ವಧೇರಾ 23 ರನ್, ರೋಹಿತ್ ಶರ್ಮಾ 11 ರನ್, ಇಶಾನ್ ಕಿಶನ್ 15 ರನ್ ಗಳಿಸಿದರು.