CricketLatestLeading NewsMain PostSports

ಹೈದರಾಬಾದ್ ಹಾರಾಟ – ಹೋರಾಟವಿಲ್ಲದೆ ಸೋತ ಆರ್‌ಸಿಬಿ

ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ಬೌಲರ್‌ಗಳ ಬೆಂಕಿ ದಾಳಿಗೆ ಒದ್ದಾಡಿದ ಆರ್‌ಸಿಬಿ ಬ್ಯಾಟ್ಸ್‌ಮ್ಯಾನ್‌ಗಳು ಹೀನಾಯ ಪ್ರದರ್ಶನ ನೀಡಿ ಸೋಲುಂಡಿದ್ದಾರೆ.

ಆರ್‌ಸಿಬಿ ನೀಡಿದ ಅಲ್ಪಮೊತ್ತ ಸನ್‍ ರೈಸರ್ಸ್‍ಗೆ ಮುಗಿಸಲು ಕೇವಲ 8 ಓವರ್ ಸಾಕಾಯಿತು. 69 ರನ್‍ಗಳ ಗುರಿಯನ್ನು 8 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 72 ರನ್ ಸಿಡಿಸಿ ಹೈದರಾಬಾದ್ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.

ಹೈದರಾಬಾದ್ ಪರ ಅಭಿಷೇಕ್ ಶರ್ಮಾ 47 ರನ್ (28, 37 ಎಸೆತ, 8 ಬೌಂಡರಿ, 1 ಸಿಕ್ಸ್) ಸಿಡಿಸಿ ಆರ್ಭಟಿಸಿದರು. ನಂತರ ವಿಲಿಯಮ್ಸನ್ ಅಜೇಯ 16 ರನ್ (17 ಎಸೆತ, 2 ಬೌಂಡರಿ) ಮತ್ತು ತ್ರಿಪಾಠಿ 7 ರನ್ (3 ಎಸೆತ, 1 ಬೌಂಡರಿ) ನೆರವಿನಿಂದ ಸುಲಭವಾಗಿ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಬ್ಯಾಟ್ಸ್‌ಮ್ಯಾನ್‌ಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಪೆವಿಲಿಯನ್ ಪರೇಡ್ ಆರಂಭಿಸಿದರು. ವಿರಾಟ್ ಕೊಹ್ಲಿ, ಅಂಜು ರಾವತ್, ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.

ನಟರಾಜನ್, ಜಾನ್ಸೆನ್ ಜರ್ಬದಸ್ತ್ ಬೌಲಿಂಗ್
ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನಪ್‍ಗೆ ಸನ್‍ರೈಸರ್ಸ್ ಬೌಲರ್‌ಗಳು ಎಲ್ಲಿಯೂ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ನಟರಾಜನ್ ಮತ್ತು ಮಾರ್ಕೊ ಜಾನ್ಸೆನ್ ಉರಿಚೆಂಡಿನ ದಾಳಿಗೆ ಪತರುಗುಟ್ಟಿದ ಆರ್‌ಸಿಬಿ 16.1 ಓವರ್‌ಗಳಲ್ಲಿ ಕೇವಲ 68 ರನ್‍ಗಳಿಗೆ ಗಂಟುಮೂಟೆ ಕಟ್ಟಿತು.

ಆರ್‌ಸಿಬಿ ಸರದಿಯಲ್ಲಿ ಮ್ಯಾಕ್ಸ್‌ವೆಲ್ 12 ಮತ್ತು ಪ್ರಭುದೇಸಾಯಿ 15 ರನ್ ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಸನ್‍ರೈಸರ್ಸ್ ಹೈದರಾಬಾದ್ ಪರ ನಟರಾಜನ್ ಮತ್ತು ಜಾನ್ಸೆನ್ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಸುಜೀತ್ 2, ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಪಡೆದು ಆರ್‌ಸಿಬಿಗೆ ಖೆಡ್ಡಾ ತೋಡಿದರು.

Leave a Reply

Your email address will not be published.

Back to top button