ಮುಂಬೈ: ಐಪಿಎಲ್ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕತ್ವ ತೊರೆದು ಆಲ್‍ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ ವಹಿಸಿದ್ದರು. ಆದರೆ ಟೂರ್ನಿಯ ಮಧ್ಯದಲ್ಲೇ ಜಡೇಜಾ ನಾಯಕತ್ವ ತ್ಯಜಿಸಿ ಮತ್ತೆ ಧೋನಿ ನಾಯಕತ್ವ ನಿರ್ವಹಿಸುವಂತೆ ಕೇಳಿಕೊಂಡಿದ್ದಾರೆ.
ಇದೀಗ ಜಡೇಜಾ ಬದಲು ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ನಡುವೆ ಜಡೇಜಾ ಯಾಕೆ ನಾಯಕತ್ವ ತ್ಯಜಿಸಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಜಡೇಜಾ ನಾಯಕತ್ವ ತ್ಯಜಿಸಲು ಆ ಒಂದು ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಸಿಎಸ್‌ಕೆ ನಾಯಕತ್ವ ಮರಳಿ ಪಡೆಯುತ್ತಿದ್ದಂತೆ ಧೋನಿ ಅಭಿಮಾನಿಗಳಿಂದ ಮೀಮ್ಸ್ ಸುರಿಮಳೆ
ಹೌದು 15ನೇ ಆವೃತ್ತಿ ಐಪಿಎಲ್‍ನಲ್ಲಿ ಜಡೇಜಾ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಪಂದ್ಯಗಳಲ್ಲಿ 2 ಜಯ ಮತ್ತು 6 ಸೋಲು ಕಂಡು ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದೆ. ಇದಕ್ಕೆ ಪ್ರಮುಖ ಕಾರಣ ಜಡೇಜಾ ನಾಯತ್ವದ ಜೊತೆಗೆ ತಮ್ಮ ವೈಯಕ್ತಿಕ ಆಟದಲ್ಲೂ ಕಳಪೆ ಪ್ರದರ್ಶನ ನೀಡಿರುವುದು. ಹೌದು ಜಡೇಜಾ 15ನೇ ಆವೃತ್ತಿಯ ಐಪಿಎಲ್‍ನಲ್ಲಿ 8 ಪಂದ್ಯಗಳಿಂದ 112 ರನ್ ಮತ್ತು ಕೇವಲ 5 ವಿಕೆಟ್ ಪಡೆದಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಯಾವುದೇ ಹೊರೆ ಇಲ್ಲದೆ ಫ್ರೀ ಯಾಗಿ ಬ್ಯಾಟ್‍ಬೀಸುತ್ತಿದ್ದ ಜಡೇಜಾ ಬ್ಯಾಟಿಂಗ್ ಈ ಬಾರಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತಿದೆ. ಜೊತೆಗೆ ಜಡೇಜಾ ನಾಯಕತ್ವದ ಹೊರೆಯನ್ನು ನಿಭಾಯಿಸಲು ಚಡಪಡಿಸುತ್ತಿದ್ದಾರೆ. ಇದು ಪ್ರತಿ ಪಂದ್ಯದಲ್ಲೂ ಎದ್ದು ಕಾಣುತ್ತಿತ್ತು. ಜೊತೆಗೆ ಧೋನಿ ಸಲಹೆಗಳು ಕೂಡುತ್ತಿದ್ದುದು ಕಂಡುಬರುತ್ತಿತ್ತು.
ಜಡೇಜಾ ನಾಯಕತ್ವದ ಹೊರೆಯಿಂದಾಗಿ ತಮ್ಮ ವೈಯಕ್ತಿಕ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಜಡೇಜಾ ಮುಂದಿನ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಾಯಕತ್ವ ತ್ಯಜಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ
ಐಪಿಎಲ್‍ನಲ್ಲಿ ರವಿ ಚಂದ್ರನ್ ಅಶ್ವಿನ್, ರಾಹುಲ್ ತೇವಾಟಿಯಾ, ಶಾರ್ದೂಲ್ ಠಾಕೂರ್ ಸಹಿತ ಕೆಲ ಆಟಗಾರರು ಆಲ್‍ರೌಂಡರ್ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದಾರೆ. ಇದು ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಗಮನಿಸುತ್ತಿದೆ. ಈ ವೇಳೆ ಜಡೇಜಾ ಪ್ರದರ್ಶನ ಕೂಡ ಗಮನ ಹರಿಸುತ್ತಾರೆ ಹಾಗಾಗಿ ಜಡೇಜಾ ತಮ್ಮ ವೈಯಕ್ತಿಕ ಆಟವನ್ನು ಐಪಿಎಲ್‍ನಲ್ಲಿ ಉತ್ತಮ ಪಡಿಸಿಕೊಂಡು ಟಿ20 ವಿಶ್ವಕಪ್ ಟೀಂನಲ್ಲಿ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
ಏನೇ ಆದರೂ ಜಡೇಜಾ ನಾಯಕತ್ವದ ಹೊರೆಯಿಂದ ಹೊರಬಂದು ತಮ್ಮ ನೈಜ ಆಟವನ್ನು ಆಡುವಂತಾಗಲಿ ಎಂಬುದು ನಮ್ಮ ಆಶಯ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ