ಮುಂಬೈ: RCB ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಟಿದಾರ್ ಬ್ಯಾಟಿಂಗ್ ಅಬ್ಬರ ಹಾಗೂ ವನಿಂದು ಜೋಶ್, ಹ್ಯಾಜಲ್‌ವುಡ್ ಅವರ ಬೌಲಿಂಗ್ ಕಮಾಲ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 67 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಭರ್ಜರಿ 192 ರನ್ ಚಚ್ಚಿ, ಹೈದರಾಬಾದ್ ತಂಡಕ್ಕೆ 193 ರನ್‌ಗಳ ಗುರಿ ನೀಡಿತ್ತು. ಈ ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 125 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಕಳೆದ ಬಾರಿ 67 ರನ್‌ಗಳಿಸಿ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ 2ನೇ ಮುಖಾಮುಖಿಯಲ್ಲಿ ರನ್‌ಗಳಿಂದ ಹೈದರಾಬಾದ್ ತಂಡವನ್ನು ಮಣಿಸಿ ತನ್ನ ಸೇಡು ತೀರಿಸಿಕೊಂಡಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ
Advertisement
ಆರ್‌ಸಿಬಿ ನೀಡಿದ 193 ರನ್‌ಗಳ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ ತಂಡವು ಮೊದಲ ಓವರ್‌ನಲ್ಲೇ 1 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡು, ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
Advertisement
ನಂತರ ಬ್ಯಾಟಿಂಗ್ ನಡೆಸಿದ ಏಡೆನ್ ಮಾರ್ಕ್ರಾಮ್ ಹಾಗೂ ರಾಹುಲ್ ತ್ರಿಪಾಟಿ ಅವರ ಜೊತೆಯಾಟವು 8 ಓವರ್‌ಗಳಲ್ಲಿ 51 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು. ಏಡನ್ ಮರ್ಕ್ರಾಮ್ 27 ಎಸೆತಗಳಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿ 21 ರನ್‌ಗಳಿಸಿ ನಿರ್ಗಮಿಸಿದರು. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್
ಇದಾದ ಬಳಿಕ ಆರ್‌ಸಿಬಿ ಬೌಲರ್‌ಗಳ ವಿರುದ್ಧ ದಾಳಿ ನಡೆಸಿದ ರಾಹುಲ್ ತ್ರಿಪಾಟಿ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ 36 ಎಸೆತಗಳಲ್ಲಿ 58 ರನ್ (6 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರುವಂತೆ ಮಾಡಿದ್ದರು. ಇವರ ಆಟಕ್ಕೆ ಬ್ರೇಕ್ ಹಾಕಿದ ಶಹಬಾಜ್ ಅಹ್ಮದ್ 37ನೇ ಎಸೆತದಲ್ಲಿ ತ್ರಿಪಾಟಿ ವಿಕೆಟ್ ಉರುಳಿಸಿದರು. ಇದರಿಂದ ಎಸ್‌ಆರ್‌ಎಚ್ ಬಹುತೇಕ ತನ್ನ ಗೆಲುವಿನ ಖಚಿತತೆಯನ್ನು ಕಳೆದುಕೊಂಡಿತು.
ನಂತರ ಬಂದ ಬ್ಯಾಟರ್‌ಗಳಲ್ಲಿ ನಿಕೋಲಸ್ ಪೂರನ್ 14 ಎಸೆತಗಳಲ್ಲಿ 19 ರನ್, ಜಗದೀಶ್ ಸುಚಿತ್ 2, ಶಶಾಂಕ್ ಸಿಂಗ್ 8 ರನ್, ಭುವನೇಶ್ವರ್ ಕುಮಾರ್ 8, ಫಜಲ್ಹಕ್ ಫಾರೂಕಿ 2 ಗಳಿಸಿದರೆ, ಉಳಿದವರು ಶೂನ್ಯಕ್ಕೆ ನಿರ್ಗಮಿಸಿದರು. ಹೈದರಾಬಾದ್ ತಂಡದ ಪರ ಜಗದೀಶ್ ಸುಚಿತ್ 4 ಓವರ್‌ಗಳಲ್ಲಿ 2 ವಿಕೆಟ್, ಕಿರಿತ್ ತ್ಯಾಗಿ 1 ವಿಕೆಟ್ ಪಡೆದರು.
ವನಿಂದು, ಜೋಶ್ ಬೌಲಿಂಗ್ ಕಮಾಲ್: ಆರ್‌ಸಿಬಿ ತಂಡದ ಪರ ವನಿಂದು ಹಸರಂಗ ಉತ್ತಮ ಬೌಲಿಂಗ್ ಮೂಲಕ ಕಮಾಲ್ ಮಾಡಿದರು. ವನಿಂದು 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸಿದರೆ, ಜೋಶ್ ಹ್ಯಾಜಲ್‌ವುಡ್ ಸಹ 3 ಓವರ್‌ಗಳಲ್ಲಿ ಕೇವಲ 10 ರನ್‌ಗಳನ್ನು ನೀಡಿ 3 ವಿಕೆಟ್ ಉರುಳಿಸಿದರು.
RCBಗೆ ಡು ಪ್ಲೆಸಿಸ್ ಆಸರೆ: ಟಾಸ್‌ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡರು. ವಿರಾಟ್ ಕೊಹ್ಲಿ ಒಂದೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದ ಬಳಿಕ ಆರಂಭಿಕ ಆಘಾತ ಎದುರಾಯಿತು. ಈ ಪೈಕಿ ವಿರಾಟ್ ಕೊಹ್ಲಿ ಪಂದ್ಯದ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವ ಮೂಲಕ ಗೋಲ್ಡನ್ ಡಕ್ ಔಟ್ ಆದರು. ಬಳಿಕ ಫಾಫ್ ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು.
ಹೈದರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದ ನಾಯಕ ಫಾಫ್ ಡು ಪ್ಲೆಸಿಸ್ 50 ಎಸೆತಗಳಲ್ಲಿ 73 ರನ್ (8 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಇದಕ್ಕೆ ಜೊತೆಯಾಗಿ ನಿಂತ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಟಿದಾರ್ 38 ಎಸೆತಗಳಲ್ಲಿ 48 ರನ್ (4 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಡುಪ್ಲೆಸಿ ಹಾಗೂ ಪಟಿದಾರ್ ಅವರ ಇಬ್ಬರ ಜೊತೆಯಾಟವು 73 ಎಸೆತಗಳಲ್ಲಿ ಭರ್ಜರಿ 105 ರನ್ (ಫಾಫ್ ಡು ಪ್ಲೆಸಿಸ್ ಹಾಗೂ ಪಡಿತರ್ ಜೋಡಿ)ಗಳನ್ನು ಪೇರಿಸಿತು. 100 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ನಂತರ ಬಂದ ಸಿಕ್ಸರ್ ವೀರ ಖ್ಯಾತಿಯ ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 33 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ (1 ಬೌಂಡರಿ, 4 ಸಿಕ್ಸರ್) ಬಾರಿಸಿ ಆರ್‌ಸಿಬಿಗೆ ನೆರವಾದರು ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಗ್ಲೇನ್ ಮ್ಯಾಕ್ಸ್‌ವೆಲ್ 2 ವಿಕೆಟ್, ಶಹಬಾಜ್ ಅಹ್ಮದ್ 1 ವಿಕೆಟ್ ಗಳಿಸಿದರು.
ರನ್ ಏರಿದ್ದು ಹೇಗೆ?
41 ಎಸೆತ 50 ರನ್
69 ಎಸೆತ 100 ರನ್
104 ಎಸೆತ 150 ರನ್
120 ಎಸೆತ 192 ರನ್