ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗುಜರಾತ್ ಟೈಟಾನ್ಸ್ ರೋಚಕ 7 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.
ಗೆಲ್ಲಲು 189 ರನ್‌ಗಳ ಗುರಿಯನ್ನು ಪಡೆದ ಗುಜರಾತ್ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಹೊಡೆದು ಫೈನಲ್ ಪ್ರವೇಶಿಸಿತು. ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ಈಗ ಮೊದಲ ಐಪಿಎಲ್ ಸರಣಿಯಲ್ಲೇ ಫೈನಲ್ ಪ್ರವೇಶಿಸಿ ವಿಶಿಷ್ಟ ಸಾಧನೆ ಮಾಡಿದೆ.
Advertisement
Advertisement
ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಬೌಲಿಂಗ್‌ನ ಸತತ ಮೂರು ಎಸೆತಗಳನ್ನು ಮಿಲ್ಲರ್ ಸಿಕ್ಸರ್‌ಗೆ ಅಟ್ಟಿ ಗುಜರಾತಿಗೆ ರೋಚಕ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?
Advertisement
ಆರಂಭದಲ್ಲೇ ವಿಕಟ್ ಪತನ:
ಮೊದಲ ಓವರಿನ ಎರಡನೇ ಎಸೆತದಲ್ಲಿ ವೃದ್ಧಿಮಾನ್ ಸಹಾ ಅವರ ವಿಕೆಟ್ ಕಳೆದುಕೊಂಡರೂ ಶುಭಮನ್ ಗಿಲ್ ಮತ್ತು ಮ್ಯಾಥ್ಯು ವೇಡ್ ಎರಡನೇ ವಿಕೆಟ್‌ಗೆ 72 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶುಭಮನ್ ಗಿಲ್ 35 ರನ್(21 ಎಸೆತ, 6 ಬೌಂಡರಿ, 1 ಸಿಕ್ಸರ್) ಮ್ಯಾಥ್ಯು ವೇಡ್ 35 ರನ್(30 ಎಸೆತ, 6 ಬೌಂಡರಿ) ಹೊಡೆದು ಔಟಾದರು.
Advertisement
ನಂತರ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಮುರಿಯದ 4ನೇ ವಿಕೆಟ್‌ಗೆ 61 ಎಸೆತಗಳಿಗೆ 106 ರನ್ ಚಚ್ಚಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಡೇವಿಡ್ ಮಿಲ್ಲರ್ 68 ರನ್(38 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾರ್ದಿಕ್ ಪಾಂಡ್ಯ 40 ರನ್(27 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.
ರನ್ ಏರಿದ್ದು ಹೇಗೆ?
50 ರನ್ 31 ಎಸೆತ
100 ರನ್ 65 ಎಸೆತ
150 ರನ್ 98 ಎಸೆತ
191 ರನ್ 117 ಎಸೆತ
ಸವಾಲಿನ ಮೊತ್ತ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ಜೋಸ್ ಬಟ್ಲರ್ ಅವರ ಅಮೋಘ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 88 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದರು. ಮೊದಲ 5 ಓವರ್‌ಗಳಲ್ಲೇ 50 ರನ್ ಕಲೆಹಾಕಿದ್ದರು. ಇದೇ ವೇಳೆ ಯಶಸ್ವಿ ಜೈಸ್ವಾಲ್ 3 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಂಜು ಸಾಮ್ಸನ್ 26 ಎಸೆತಗಳಲ್ಲಿ 47 ರನ್ (5 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಟೈಟಾನ್ಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇನ್ನೇನು ಅರ್ಧ ಶತಕ ಪೂರೈಸಬೇಕು ಎನ್ನುವಷ್ಟರಲ್ಲೇ ಸಾಯಿ ಕಿಶೋರ್ ಬೌಲಿಂಗ್‌ಗೆ ಬೌಂಡರಿಲೈನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಜೋಸ್ ಬಟ್ಲರ್ ಜೊತೆಗೂಡಿದ ಕನ್ನಡಿಗ ದೇವದತ್ ಪಡಿಕ್ಕಲ್ 20 ಎಸೆತಗಳಲ್ಲಿ 28 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಶಿಮ್ರೋನ್ ಹೆಟ್ಮೆಯರ್ 4 ರನ್ ಗಳಿಸಿ ಔಟಾದರು.
ಶತಕ ವಂಚಿತ ಬಟ್ಲರ್:
ಆರಂಭಿಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಕೊನೆಯವರೆಗೂ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿದರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಮಾಡಿದ ಬಟ್ಲರ್ 42 ಎಸೆತಗಳಲ್ಲಿ ಅರ್ಧಶತಕ ಕಲೆಹಾಕಿದ್ದರು. ಬಳಿಕ ಬಿರುಸಿನ ದಾಳಿ ನಡೆಸಿ, 56 ಎಸೆತಗಳಲ್ಲಿ 89 ರನ್ (12 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಕೊನೆಯ ಒಂದು ಎಸೆತ ಬಾಕಿ ಇರುವಾಗಲೇ ರನೌಟ್ ಆದರು. ಬಟ್ಲರ್ ಅಬ್ಬರ ಬ್ಯಾಟಿಂಗ್‌ನಿಂದ ಆರ್‌ಆರ್ ತಂಡವು 180ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.
ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿದರು. ಇನ್ನುಳಿದ ಮೊಹಮ್ಮದ್ ಶಮಿ 4 ಓವರ್‌ಗಳಲ್ಲಿ 43, ಸಾಯಿ ಕಿಶೋರ್ 4 ಓವರ್‌ಗಳಲ್ಲಿ 43, ಯಶ್ ದಯಾಳ್ 4 ಓವರ್‌ನಲ್ಲಿ 46 ರನ್, ಹಾರ್ದಿಕ್ ಪಾಂಡ್ಯ 2 ಓವರ್‌ಗಳಲ್ಲಿ 14 ರನ್ ನೀಡಿ ತಲಾ ಒಂದೊಂದು ವಿಕೆಟ್ ಪಡೆದರು.
ಆರ್ ಆರ್ ರನ್ ಏರಿದ್ದು ಹೇಗೆ?
34 ಎಸೆತ 50 ರನ್
79 ಎಸೆತ 100 ರನ್
104 ಎಸೆತ 450 ರನ್
120 ಎಸೆತ 188 ರನ್