CricketLatestLeading NewsMain PostSports

ಗೆಲುವಿನೊಂದಿಗೆ ಹೊರನಡೆದ ಪಂಜಾಬ್ – ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ಹೈದರಾಬಾದ್

ಮುಂಬೈ: ಔಪಚಾರಿಕ ಪಂದ್ಯದಲ್ಲಿ ಪಂಜಾಬ್ ಪರ ಕೊನೆಯ ಲೀಗ್ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‍ಸ್ಟೋನ್ ಮತ್ತೆ ಬ್ಯಾಟಿಂಗ್‍ನಲ್ಲಿ ಮಿಂಚಿ ತಂಡಕ್ಕೆ 5 ವಿಕೆಟ್‍ಗಳ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಗೆಲುವಿನೊಂದಿಗೆ ಪಂಜಾಬ್ ತಂಡ ಟೂರ್ನಿಗೆ ಅಂತ್ಯವಾಡಿದೆ.

ಟೂರ್ನಿಯುದ್ದಕ್ಕೂ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಶೈನ್ ಆದ ಲಿವಿಂಗ್‍ಸ್ಟೋನ್ ಕೊನೆಯ ಲೀಗ್ ಪಂದ್ಯದಲ್ಲಿ ಅಜೇಯ 49 ರನ್ (22 ಎಸೆತ, 2 ಬೌಂಡರಿ, 5 ಸಿಕ್ಸ್) ಚಚ್ಚಿ ಅಬ್ಬರಿಸಿದ ಪರಿಣಾಮ ಹೈದರಾಬಾದ್ ನೀಡಿದ 158 ರನ್‍ಗಳ ಟಾರ್ಗೆಟ್ ಉಡೀಸ್ ಆಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಪಂಜಾಬ್ ತಂಡ 15.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ ಇನ್ನೂ 29 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು.

ಈ ಜಯದೊಂದಿಗೆ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 6 ಸ್ಥಾನಕ್ಕೆ ತೃಪಿಪಟ್ಟರೆ, ಹೈದರಾಬಾದ್ ತಂಡವನ್ನು ಸೋಲಿಸಿ 8ನೇ ಸ್ಥಾನಕ್ಕೆ ಇಳಿಸಿ ಟೂರ್ನಿಯಿಂದ ಹೊರದಬ್ಬಿದೆ.

ಈ ಮೊದಲು ಪಂದ್ಯದ ಟಾಸ್ ಗೆದ್ದ ಹೈದರಾಬಾದ್ ತಂಡದ ಹಂಗಾಮಿ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬ್ಯಾಟಿಂಗ್ ಮಾಡುವ ಮನಸ್ಸು ಮಾಡಿದರು. ಇತ್ತ ಬ್ಯಾಟಿಂಗ್ ಆಗಮಿಸುತ್ತಿದ್ದಂತೆ ಹೈದರಾಬಾದ್ ಆರಂಭಿಕ ಆಟಗಾರ ಪ್ರಿಯಾಂ ಗಾರ್ಗ್ 4 ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಆ ಬಳಿಕ ಒಂದಾದ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಕೆಲಕಾಲ ಪಂಜಾಬ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು. ಆದರೆ ತ್ರಿಪಾಠಿ ಆಟ 20 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಅಂತ್ಯವಾಯಿತು. ಇತ್ತ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 43 ರನ್ (32 ಎಸೆತ, 5 ಬೌಂಡರಿ, 2 ಸಿಕ್ಸ್) ಚಚ್ಚಿ ಹೊರನಡೆದರು. ಆ ಬಳಿಕ ಬಂದ ಮಾರ್ಕ್ರಾಮ್‌  ಕೂಡ 21 ರನ್ (17 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರು.

ನಾಥನ್ ಎಲ್ಲಿಸ್, ಹರ್‌ಪ್ರೀತ್‌ ಮಾರಕ ದಾಳಿ:
ಸ್ಲಾಗ್‌ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ 25 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರೊಮಾರಿಯೋ ಶೆಫರ್ಡ್ ಅಜೇಯ 26 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿದ ನೆರವಿನಿಂದ ಒಟ್ಟು 8 ವಿಕೆಟ್ ಕಳೆದುಕೊಂಡು 157 ರನ್ ಪೇರಿಸಿತು. ಪಂಜಾಬ್ ಬೌಲರ್‌ಗಳಾದ ನಾಥನ್ ಎಲ್ಲಿಸ್ ಮತ್ತು ಹರ್‌ಪ್ರೀತ್‌ ಮಾರಕ ದಾಳಿ ಸಂಘಟಿಸಿ ತಲಾ 3 ವಿಕೆಟ್ ಪಡೆದು ಮಿಂಚಿದರು.

Leave a Reply

Your email address will not be published.

Back to top button