ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.
Advertisement
160 ರನ್‍ಗಳ ಗುರಿ ಪಡೆದ ಮುಂಬೈ ಗೆಲುವಿಗಾಗಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಟಿಮ್ ಡೇವಿಡ್ 34 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ವಿಕೆಟ್ ಕಳೆದುಕೊಂಡಿತು. ಈ ಮೊದಲು ಡೇವಿಡ್ ಅವರ ಸ್ಫೋಟಕ ಆಟ ಮುಂಬೈ ಗೆಲುವನ್ನು ಮತ್ತಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿ ಮುಂಬೈ ಗೆಲುವಿನ ನಗೆ ಬೀರಿತು. ಈ ಗೆಲುವು ಆರ್‌ಸಿಬಿ ಪ್ಲೇ ಆಫ್‍ಗೇರಲು ನೆರವಾಯಿತು. ಇತ್ತ ಮಹತ್ವದ ಪಂದ್ಯ ಸೋತ ಡೆಲ್ಲಿ ತಂಡದ ಈವರೆಗಿನ ಹೋರಾಟ ವ್ಯರ್ಥವಾಯಿತು.
Advertisement
Advertisement
ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಒಂದಾದ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬ್ರೆವಿಸ್ 37 ರನ್ (33 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಕಿಶನ್ 48 ರನ್ (35 ಎಸೆತ, 3 ಬೌಂಡರಿ, 4 ಸಿಕ್ಸ್) ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ 51 ರನ್ (37 ಎಸೆತ) ಜೊತೆಯಾಟವಾಡಿದರು.
Advertisement
ಈ ಮೊದಲು ತೀವ್ರ ಕುತೂಹಲ ಮೂಡಿಸಿದ ಪಂದ್ಯದ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಡೆಲ್ಲಿ ತಂಡದ ಆರಂಭಿಕರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಡೇವಿಡ್ ವಾರ್ನರ್ 5 ರನ್‍ಗೆ ಸುಸ್ತಾದರೆ, ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತ ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ಪೃಥ್ವಿ ಶಾ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.
ಪಂತ್, ಪೊವೆಲ್ ಜೊತೆಯಾಟ
50 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ರೋವ್ಮನ್ ಪೊವೆಲ್ ಚೇತರಿಕೆ ನೀಡಲು ಮುಂದಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೌಂಡರಿ, ಸಿಕ್ಸ್ ಸಿಡಿಸುತ್ತ ಮೊತ್ತ ಹೆಚ್ಚಿಸಿದ ಈ ಜೋಡಿ 5ನೇ ವಿಕೆಟ್‍ಗೆ 75 ರನ್ (44 ಎಸೆತ) ಜೊತೆಯಾಟವಾಡಿತು. ಈ ವೇಳೆ ಪಂತ್ 39 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು. ಆ ಬಳಿಕ ಪೊವೆಲ್ 43 ರನ್ (34 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಬುಮ್ರಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.
ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅಜೇಯ 19 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159ಕ್ಕೆ ಏರಿತು.
ಮುಂಬೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಬುಮ್ರಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ರಮಣದೀಪ್ ಸಿಂಗ್ 2, ಡೇನಿಯಲ್ ಸ್ಯಾಮ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 1 ವಿಕೆಟ್ ಪಡೆದರು.