ಮುಂಬೈ: ರಾಹುಲ್ ಭರ್ಜರಿ ಶತಕದಾಟ ಮತ್ತು ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯಿಂದ ಮುಂಬೈ ತಂಡವನ್ನು ಕಟ್ಟಿಹಾಕಿದ ಲಕ್ನೋ 36 ರನ್‍ಗಳ ಭರ್ಜರಿ ಜಯ ಗಳಿಸಿತು.
Advertisement
ಲಕ್ನೋ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮುಂದೆ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಗಿ ಸತತ 8ನೇ ಸೋಲುಂಡಿತು.
Advertisement
Advertisement
ಗೆಲ್ಲಲು 169 ರನ್ ಗುರಿ ಬೆನ್ನಟ್ಟಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಇಶಾನ್ ಕಿಶನ್ 8 ರನ್ (20 ಎಸೆತ) ವಿಕೆಟ್ ನೀಡಿ ಹೊರ ನಡೆದರು. ನಂತರ ಬಂದ ಡೆವಾಲ್ಡ್ ಬ್ರೆವಿಸ್ 3 ರನ್‍ಗೆ ಸುಸ್ತಾದರು. ಇತ್ತ ರೋಹಿತ್ ಶರ್ಮಾ 39 ರನ್ (31 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಸಿಡಿಯುವ ಸೂಚನೆ ನೀಡಿ ಔಟ್ ಆದರು. ನಂತರ ತಿಲಕ್ ವರ್ಮಾ 38 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಗೆಲುವಿಗಾಗಿ ಹೋರಾಟ ನಡೆಸಿ ವಿಕೆಟ್ ಕೈಚೆಲ್ಲಿಕೊಂಡರು ಇದರೊಂದಿಗೆ ಮುಂಬೈ ಸೋಲು ಖಾತ್ರಿಯಾಯಿತು.
Advertisement
ರಾಹುಲ್ ರಣಾರ್ಭಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಆಟಗಾರ ಡಿ ಕಾಕ್‍ರನ್ನು 10 ರನ್ (9 ಎಸೆತ, 1 ಸಿಕ್ಸ್) ಬೇಗನೆ ಕಳೆದುಕೊಂಡಿತು. ಆದರೆ ಇತ್ತ ಕೆ.ಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್‍ಗೆ ಮುಂದಾದರು.
ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಮನೀಶ್ ಪಾಂಡೆ 2ನೇ ವಿಕೆಟ್‍ಗೆ 58 ರನ್ (47 ಎಸೆತ) ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ದಾಳಿಗಿಳಿದ ಪೋಲಾರ್ಡ್, 22 ರನ್ (22 ಎಸೆತ, 1 ಸಿಕ್ಸ್) ಸಿಡಿಸಿದ್ದ ಮನೀಶ್ ಪಾಂಡೆ ವಿಕೆಟ್ ಪಡೆಯಲು ಯಶಸ್ವಿಯಾದರು.
ಆ ಬಳಿಕ ಏಕಾಏಕಿ ಕುಸಿತಕಂಡ ಲಕ್ನೋಗೆ ರಾಹುಲ್ ಏಕಾಂಗಿ ಹೋರಾಟದ ಮೂಲಕ ಬಲ ತುಂಬಿದರು. ಮುಂಬೈ ಬೌಲರ್‌ಗಳಿಗೆ ಸೆಡ್ಡು ಹೊಡೆದ ರಾಹುಲ್ 15ನೇ ಆವೃತ್ತಿ ಐಪಿಎಲ್‍ನ 2ನೇ ಶತಕ ಸಿಡಿಸಿ ಮೆರೆದಾಡಿದರು. ಆರಂಭದಿಂದ ಕೊನೆಯ ಎಸೆತದವರೆಗೆ ಬ್ಯಾಟ್‍ಬೀಸಿದ ರಾಹುಲ್ ಅಜೇಯ 103 ರನ್ (62 ಎಸೆತ, 12 ಬೌಂಡರಿ, 4 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಲಕ್ನೋ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಪೇರಿಸಿತು.