CricketLatestLeading NewsMain PostSports

‘ಸಮ’ಬಲಶಾಲಿಗಳ ಹೋರಾಟದಲ್ಲಿ 62 ರನ್‌ಗಳ ಜಯ – ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ

ಮುಂಬೈ: ಐಪಿಎಲ್ 2022ರ 15ನೇ ಆವೃತ್ತಿಯಲ್ಲಿ ಹೊಸ ತಂಡವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟನ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. 15ನೇ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಇದಾಗಿದೆ.

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ಸಾಧಾರಣ ಮೊತ್ತ ದಾಖಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ಗೆಲ್ಲಲು 145 ರನ್‌ಗಳ ಟಾರ್ಗೆಟ್ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ತಂಡವು 13.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 82 ರನ್ ಗಳನ್ನಷ್ಟೇ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

IPL 2022 GT VS LSG SHUBMAN GILL

ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ: ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದರು. 144 ರನ್‌ಗಳಿಗೆ ಗುಜರಾತ್ ಟೈಟನ್ಸ್ ತಂಡವನ್ನು ಕಟ್ಟಿ ಹಾಕಿದರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ತೋರಿದ್ದು, ತಂಡದ ಸೋಲಿಗೆ ಕಾರಣವಾಯ್ತು.

ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ 8 ರನ್, ಕ್ವಿಂಟನ್ ಡಿಕಾಕ್ 11 ರನ್‌ಗಳಿಸಿ ನಿರ್ಗಮಿಸಿದ್ದು, ತಂಡಕ್ಕೆ ಆರಂಭಿಕ ಆಘಾತ ನೀಡಿತು. ನಂತರದಲ್ಲಿ ದೀಪಕ್ ಹೂಡಾ ಅವರ ಹೋರಾಟ 3 ಬೌಂಡರಿ ಸೇರಿ 27 ರನ್‌ಗಳನ್ನು ಹೊಡೆದರು. ನಂತರ ಸ್ಥಿರವಾಗಿ ನಿಲ್ಲದ ಆಟಗಾರರು ಒಂದಂಕಿಯ ರನ್‌ಗಳಿಸಿ ಪೆವಿಲಿಯನ್ ಸೇರಿದರು.

IPL 2022 GT VS LSG - AVESH KHAN

ಕರಣ್ ಶರ್ಮಾ 4, ಕೃನಾಲ್ ಪಾಂಡ್ಯ 5, ಮಾರ್ಕಸ್ ಸ್ಟೋಯ್ನಿಸ್ 2, ಆಯುಷ್ ಬದೋನಿ 8, ಜೇಸನ್ ಹೋಲ್ಡರ್ 1, ಮೊಹ್ಸಿನ್ ಖಾನ್ 1 ರನ್‌ಗಳಿಸಿದರು. ದುಷ್ಮಂತ ಚಮೀರ ಶೂನ್ಯಕ್ಕೆ ಅಜೇಯರಾಗುಳಿದರು.

ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಬೌಲರ್ ಆವೇಶ್ ಖಾನ್ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 5 ವಿಕೆಟ್ ಪಡೆದರು. ಇನ್ನುಳಿದಂತೆ ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಪಡೆದರು.

IPL 2022 GT VS LSG - RAHUL THEVATIYA

ಟೈಟನ್ಸ್‌ಗೆ ಗಿಲ್ ಆಸರೆ: ಗುಜರಾತ್ ಟೈಟನ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್‌ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಮೊದಲ ವಿಕೆಟ್‌ಗೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಎಡವಿದರು. 2.4 ಓವರ್‌ಗಳಾಗಿದ್ದಾಗ ವೃದ್ಧಿಮಾನ್ ಸಹಾ 11 ಎಸೆತಗಳಲ್ಲಿ 5 ರನ್ ಬಾರಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ 7 ಎಸೆತಗಳಲ್ಲಿ 10 ರನ್ ಕಲೆ ಹಾಕಿ ಔಟಾದರು.

ಈ ನಡುವೆಯೂ ಗುಜರಾತ್ ತಂಡಕ್ಕೆ ಕೊನೆಯವರೆಗೂ ಆಸರೆಯಾಗಿ ನಿಂತವರು ಶುಭಮನ್ ಗಿಲ್. ಅವರ ಅರ್ಧಶತಕದ ನೆರವಿನಿಂದ ತಂಡವು 140 ರನ್ ಗಡಿ ದಾಟಿತು. 49 ಎಸೆತಗಳನ್ನು ಎದುರಿಸಿದ ಅವರು 7 ಫೋರ್ ಸಹಿತ ಅಜೇಯ 63 ರನ್ ದಾಖಲಿಸಿದರು. ನಿಗದಿತ 20 ಓವರ್‌ಗಳಲ್ಲಿ ತಂಡವು 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು.

IPL 2022 GT VS LSG -

ಇದಕ್ಕೆ ಸಾಥ್ ನೀಡಿದ ಡೇವಿಡ್ ಮಿಲ್ಲರ್ (26 ರನ್) ಮತ್ತು ರಾಹುಲ್ ತೆವಾಟಿಯಾ (22 ರನ್) ಅವರ ಜೊತೆಯಾಟದಿಂದ ತಂಡವು 140 ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಪಾಯಕಾರಿ ಆಗಬಹುದಾಗಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 11 ರನ್‌ಗಳನ್ನು ಗಳಿಸಿ ಅತೀ ಸುಲಭದ ಕೀಪರ್‌ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಬೆನ್ನಲ್ಲೇ ಮ್ಯಾಥ್ಯು ವೇಡ್ 10 ರನ್‌ಗಳಿಸಿ ಆವೇಶ್ ಖಾನ್ ಬೌಲಿಂಗ್‌ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಹೀಗೆ ಗುಜರಾತ್ ಟೈಟನ್ಸ್ ತಂಡದ ಪರ ಶುಭ್‌ಮನ್ ಗಿಲ್, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೇವಾಟಿಯಾ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.

Leave a Reply

Your email address will not be published.

Back to top button