ಮುಂಬೈ: ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ ಮತ್ತು ಪೊವೆಲ್ ಪರಾಕ್ರಮದ ಮುಂದೆ ಧೂಳಿಪಟವಾದ ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಹೈದರಾಬಾದ್ 21 ರನ್‍ಗಳ ಅಂತರದಿಂದ ಸೋಲಿಗೆ ಶರಣಾಯಿತು.
Advertisement
208 ರನ್‍ಗಳ ಬಾರಿ ಮೊತ್ತವನ್ನು ಚೇಸ್ ಮಾಡುವ ವೇಳೆ ಹೈದರಾಬಾದ್ ಪರ ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್‍ಗೆ ಗೆಲುವಿನ ಆಸೆ ಚಿಗುರಿಸಿದ ಪೂರನ್ 62 ರನ್ (34 ಎಸೆತ, 2 ಬೌಂಡರಿ, 6 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆಗೆ ಬ್ರೇಕ್ ಬಿತ್ತು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್‍ಗಳಿಸಿ 21 ರನ್‍ಗಳಿಂದ ಸೋಲು ಅನುಭವಿಸಿತು.
Advertisement
ಡೆಲ್ಲಿ ನೀಡಿದ ಬೃಹತ್ ಗುರಿ ಬೆನ್ನಟ್ಟುವಲ್ಲಿ ಹೈದರಾಬಾದ್ ಆರಂಭದಲ್ಲೇ ಎಡವಿತು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ರಾಹುಲ್ ತ್ರಿಪಾಠಿ ಮತ್ತು ಮಾಕ್ರಾರ್ಮ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರೂ ಹೆಚ್ಚು ಹೊತ್ತು ನಡೆಯಲಿಲ್ಲ.
Advertisement
Advertisement
ಡೆಲ್ಲಿ ಬೌಲರ್‌ಗಳ ಶಿಸ್ತಿನ ದಾಳಿಗೆ ತ್ರಿಪಾಠಿ 22 ರನ್ (18 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಮಾಕ್ರಾರ್ಮ್ 42 ರನ್ (25 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು.
ಮೊದಲು ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನ ನೀಡಿದರು. ನಾಯಕನ ನಿರ್ಧಾರದಂತೆ ಹೈದರಾಬಾದ್ ಬೌಲರ್‌ಗಳು ಆರಂಭದಲ್ಲೇ ಮನ್‍ದೀಪ್ ಸಿಂಗ್ ಮತ್ತು ಮಿಚೆಲ್ ಮಾರ್ಷ್ ಅವರ ಪ್ರಮುಖ 2 ವಿಕೆಟ್ ಕಿತ್ತು ಆರಂಭಿಕ ಮುನ್ನಡೆಯನ್ನು ತಂದುಕೊಟ್ಟರು.
ಆರಂಭಿಕ ಆಘಾತದ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರಿಷಭ್ ಪಂತ್ ಚೇತರಿಕೆ ನೀಡಿದರು. ಪಂತ್ 26 ರನ್ (16 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.
ವಾರ್ನರ್, ಪೊವೆಲ್ ರಣಾರ್ಭಟ:
ಮೂರು ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರೋವ್ಮನ್ ಪೊವೆಲ್ ಮನಬಂತಂತೆ ಬ್ಯಾಟ್‍ಬೀಸಿದರು. ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಸರಾಗವಾಗಿ ಅಟ್ಟಿದ ಈ ಜೋಡಿ ವೇಗವಾಗಿ ರನ್ ಏರಿಸಲು ಆರಂಭಿಸಿತು.
ಅದರಲ್ಲೂ ವಾರ್ನರ್ ಅಂತು ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡು ತಿರಿಸಿಕೊಳ್ಳುತ್ತಿರುವಂತೆ ಬೌಂಡರಿ, ಸಿಕ್ಸ್ ಚಚ್ಚಿ ಕಾಡಿದರು. ಒಂದು ಹಂತದಲ್ಲಿ 180ರ ಗಡಿದಾಟುವ ಹಂತದಲ್ಲಿದ್ದ ವೇಳೆ ಪೊವೆಲ್ ಸ್ಫೋಟಕ ಆಟಕ್ಕೆ ಮುಂದಾದರು ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಹೈದರಾಬಾದ್ ಬೌಲರ್‌ಗಳಿಗೆ ನೀರು ಕುಡಿಸಿದ ಈ ಜೋಡಿ 4 ವಿಕೆಟ್‍ಗೆ ಮುರಿಯದ 122 ರನ್ (66 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ ವಾರ್ನರ್ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಮತ್ತು ಪೊವೆಲ್ 67 ರನ್ (35 ಎಸೆತ, 3 ಬೌಂಡರಿ, 6 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 207 ರನ್‍ಗಳ ಬೃಹತ್ ಮೊತ್ತ ಪೇರಿಸಿದರು.
ರನ್ ಏರಿದ್ದು ಹೇಗೆ?
36 ಎಸೆತ 50 ರನ್
67 ಎಸೆತ 100 ರನ್
150 ರನ್ 99 ಎಸೆತ
200 ರನ್ 119 ಎಸೆತ
207 ರನ್ 120 ಎಸೆತ