ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

Public TV
2 Min Read
IPL 2022 VIRAT KOHLI

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಪ್ಲೇ-ಆಫ್ ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಬಿಸಿಸಿಐ ಹೊಸ ನಿಯಮ ಪ್ರಕಟಿಸಿದೆ.

ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಒಂದಿಲ್ಲೊಂದು ಲಕ್ ಒಲಿಯುತ್ತಿದ್ದು, ಬಹುಶಃ ಚಾಂಪಿಯನ್ ಆಗುವ ಅವಕಾಶವಿದ್ದಂತೆಯೇ ಕಾಣುತ್ತಿದೆ. ಪ್ಲೇ ಆಫ್‌ನಿಂದ ಹೊರಬೀಳಬೇಕಿದ್ದ ಆರ್‌ಸಿಬಿ ಮುಂಬೈ ಗೆಲುವಿನ ಕೃಪೆಯಿಂದ ಪ್ಲೇ-ಆಫ್ ಪ್ರವೇಶಿಸಿತು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ, ರನ್‌ರೇಟ್ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂಪರ್ ಓವರ್ ನಿಯಮವನ್ನು ಅನುಷ್ಠಾನಗೊಳಿಸಿದ್ದು, ಹೆಚ್ಚುವರಿ ಸಮಯವನ್ನೂ ನಿಗದಿ ಮಾಡಲಾಗಿದೆ. ಈ ಬೆಳವಣಿಗೆ ಆರ್‌ಸಿಬಿಗೆ ವರ.

IPL 2022 RCB VS SRH 5

ಮಳೆ ಅಡ್ಡಿಯಿಂದ ನಿಗದಿತ ಸಮಯದೊಳಿಗೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಕೇವಲ ಸೂಪರ್ ಓವರ್ ವಿಜೇತರನ್ನು ನಿರ್ಧರಿಸಲಿದೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಸೂಪರ್ ಓವರ್‌ನಿಂದಲೇ ಫಲಿತಾಂಶ ನಿರ್ಧರಿಸುವ ನಿಯಮ ಇದೇ ಮೊದಲಿಗೆ ಬಿಸಿಸಿಐ ಮಾಡಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

ಫೈನಲ್ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್ ಕಡಿತಗೊಳಿಸದೆ ರಾತ್ರಿ 9:40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯ ಆರಂಭಿಸಲು ರಾತ್ರಿ 11:56 ರವರೆಗೂ ಸಮಯವಿರಲಿದೆ. 5 ಓವರ್ ಪಂದ್ಯದಲ್ಲಿ ಟೈಮ್‌ಔಟ್ ಇರುವುದಿಲ್ಲ. ಅಲ್ಲದೆ ಮಧ್ಯರಾತ್ರಿ 12:50ರೊಳಗೆ ಪಂದ್ಯ ಮುಗಿಸುವಂತೆ ನಿಯಮ ಮಾಡಿದೆ.

IPL 2022 GT VS LSG PLAYOFF 1

5 ಓವರ್ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್ ಓವರ್ ನಡೆಯಲಿದೆ. ಇದಕ್ಕೆ ಮಧ್ಯರಾತ್ರಿ 12:50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ.  ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

ಕ್ವಾಲಿಫೈಯರ್-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್ ನೇರವಾಗಿ ಫೈನಲ್‌ಗೇರಲಿದೆ. ರಾಜಾಸ್ಥಾನ ಕ್ವಾಲಿಫೈಯರ್-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಪ್ಲೇ ಆಫ್ ಪಂದ್ಯಕ್ಕೆ ಲಖನೌ ಪ್ರವೇಶ ಪಡೆಯಲಿದೆ.

IPL 2022 LSG 3

ಫೈನಲ್ ಪಂದ್ಯಕ್ಕೆ ಏನು ನಿಯಮ?: ಮೇ 29ಕ್ಕೆ ನಿಗದಿಯಾಗಿರುವ ಫೈನಲ್ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10:10ರ ವರೆಗೂ ಅವಕಾಶವಿರಲಿದೆ. 5 ಓವರ್ ಪಂದ್ಯ ನಡೆಸಲುಮಧ್ಯ ರಾತ್ರಿ 12:26ರ ವರೆಗೂ ಕಾಲಾವಕಾಶ ಇರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿ ಇಡಲಾಗಿದೆ.

IPL2022

ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್ ಹಾಕಲಾಗುತ್ತದೆ. ಒಂದು ವೇಳೆ ಮೊದಲ ಇನ್ನಿಂಗ್ಸ್ ಮುಗಿದು, 2ನೇ ಇನ್ನಿಂಗ್ಸ್‌ 5 ಓವರ್ ಪೂರ್ಣಗೊಂಡ ಬಳಿಕ ಮಳೆ ಸುರಿದರೆ, ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೀಸಲು ದಿನದಂದು ಕೇವಲ ಸೂಪರ್ ಓವರ್ ನಿಂದಲೂ ಫಲಿತಾಂಶ ನಿರ್ಧರಿಸಬಹುದಾಗಿದೆ.

ಫೈನಲ್‌ನಲ್ಲಿ ಸೂಪರ್ ಓವರ್ ಆರಂಭಿಸಲು ಮಧ್ಯರಾತ್ರಿ 1.20ರ ವರೆಗೂ ಅವಕಾಶವಿರಲಿದೆ.

Share This Article
Leave a Comment

Leave a Reply

Your email address will not be published. Required fields are marked *